ADVERTISEMENT

ಸಾಲಿಗ್ರಾಮ: ತಾಲ್ಲೂಕು ಕೇಂದ್ರದ ನಿಲ್ದಾಣದಲ್ಲೇ ಅವ್ಯವಸ್ಥೆ

ಸಾಲಿಗ್ರಾಮ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ: ಕೆಟ್ಟಿರುವ ಸಿಸಿಟಿವಿ ಕ್ಯಾಮೆರಾ

ಸಾಲಿಗ್ರಾಮ ಯಶವಂತ್
Published 12 ಮೇ 2025, 7:01 IST
Last Updated 12 ಮೇ 2025, 7:01 IST
   

ಸಾಲಿಗ್ರಾಮ: ತಾಲ್ಲೂಕು ಕೇಂದ್ರ ವಾದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಪ್ರಯಾಣಿಕರಿಗೆ ಮೂಲಸೌಕರ್ಯಗಳೇ ಇಲ್ಲ.

ಗಡಿ ಭಾಗದ ಸಾಲಿಗ್ರಾಮ ಹೊಸ ತಾಲ್ಲೂಕು ಕೇಂದ್ರವಾಗಿ 8 ವರ್ಷಗಳೇ ಕಳೆಯುತ್ತಿವೆ. ಆದರೆ, ಇಲ್ಲಿನ ಜನರು ಜಿಲ್ಲಾ ಕೇಂದ್ರಕ್ಕೆ ತೆರಳಲು ರಾಜ್ಯ ಸಾರಿಗೆ ಬಸ್‌ಗಳ ಕೊರತೆ ಕಂಡುಬರುತ್ತಿದೆ. ಪರಿಣಾಮ, ಇಲ್ಲಿನ ನಿಲ್ದಾಣದಲ್ಲಿ ಕಾಯುತ್ತಾ ಕೂರಬೇಕಾದ ಸ್ಥಿತಿ ಇದೆ. ಕುಳಿತುಕೊಳ್ಳುವುದಕ್ಕೆ ಆಸನಗಳ ವ್ಯವಸ್ಥೆಯೂ ಇಲ್ಲಿಲ್ಲ!

8 ಘಟಕಗಳಿಂದ 71 ಬಸ್‌ಗಳು ಈ ನಿಲ್ದಾಣಕ್ಕೆ ಬರುತ್ತವೆ ಎಂದು ಫಲಕದಲ್ಲಿ ಘೋಷಣೆ ಇದೆ. ದಿನದಲ್ಲಿ 195 ಟ್ರಿಪ್ ನಿರ್ವಹಿಸುವ ಕರ್ತವ್ಯ ಪಟ್ಟಿಯೂ ಪ್ರತಿ ದಿನ ಸಿದ್ಧವಿರುತ್ತದೆ. ಆದರೆ, ಕೆಲವು ಘಟಕಗಳಿಂದ ಬಸ್‌ಗಳೇ ಬರುವುದಿಲ್ಲ. ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಆಸನ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಪ್ರಯಾಣಿಕರು ನೆಲದ ಮೇಲೆ ಕುಳಿತು ಕಾಯಬೇಕಾದ ದುಃಸ್ಥಿತಿ ಇದೆ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ಜನರು ಬಸ್‌ಗಾಗಿ ಕಾಯುವುದು ಕಂಡುಬರುತ್ತಿದೆ.

ADVERTISEMENT

ಸುಸ್ತಾಗುತ್ತದೆ: ‘ಕೆ.ಆರ್. ನಗರ ಘಟಕ ಸೇರಿದಂತೆ ಅರಕಲಗೂಡು, ಪಿರಿಯಾಪಟ್ಟಣ, ಹೊಳೆನರಸೀಪುರ, ರಾಮನಾಥಪುರ, ಹಾಸನ, ಮೈಸೂರು, ಸಕಲೇಶಪುರ ಘಟಕಗಳಿಂದ ಸುಮಾರು 71ಕ್ಕೂ ಅಧಿಕ ಬಸ್‌ಗಳು ಪ್ರತಿ ದಿನ 195 ಟ್ರಿಪ್ ಮಾಡುತ್ತಿವೆ ಎಂದು ನಿಲ್ದಾಣದ ಫಲಕದಲ್ಲಿದೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕರು ಪ್ರ ದಿನ ಬಸ್ ಇಲ್ಲದೆ ನಿಲ್ದಾಣದಲ್ಲಿ ಕಾದು ಸುಸ್ತಾಗುವುದು ತಪ್ಪುತ್ತಿಲ್ಲ’ ಎಂದು ಪ್ರಯಾಣಿಕ ಸಂದೀಪ್ ಆರೋಪಿಸಿದರು.

ಎನ್.ಚಲುವರಾಯಸ್ವಾಮಿ ಅವರು ಮಂಡ್ಯ ಲೋಕಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಸಾಲಿಗ್ರಾಮ ಬಸ್ ನಿಲ್ದಾಣಕ್ಕೆ ಸಿಸಿ ಟಿವಿ ಕ್ಯಾಮೆರಾವನ್ನು ಹಾಕಿಸಿದ್ದರು. ಅವು ಕೆಟ್ಟು ವರ್ಷಗಳೇ ಕಳೆದರೂ ದುರಸ್ತಿ ಭಾಗ್ಯ ದೊರೆತಿಲ್ಲ. ಇದರಿಂದ ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ಮಹಿಳೆಯರು ಚಿನ್ನದ ಮಾಂಗಲ್ಯ ಸರವನ್ನು ಕಳೆದು ಕೊಳ್ಳುತ್ತಿದ್ದರೆ. ಪುರುಷರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಪ್ರಯಾಣಿಕರು ತಿಳಿಸಿದರು.

‘ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಆಸನ, ಶುದ್ಧ ಕುಡಿಯುವ ನೀರು ಲಭ್ಯವಿಲ್ಲ‌. ಕುಡಿಯುವ ನೀರಿನ ಘಟಕವಿದ್ದು ಕೆಟ್ಟಿರುವುದರಿಂದ, ಇದ್ದೂ ಇಲ್ಲದಂತಾಗಿದೆ. ನಿಗಮದ ಅಧಿಕಾರಿ ಗಳು ಇತ್ತ ಗಮನಹರಿಸದಿರುವುದು ವಿಪರ್ಯಾಸ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.

ನೆಪ ಹೇಳುವ ಸಿಬ್ಬಂದಿ: ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಮಾಡಲು ಪ್ರತಿ ದಿನವೂ ಪಟ್ಟಣವು ಸೇರಿದಂತೆ ಹಾಸನ ಜಿಲ್ಲೆಯ ಕೊಣನೂರು, ರಾಮನಾಥಪುರ, ಹಳ್ಳಿಮೈಸೂರು, ಹೆಬ್ಬಾಲೆ ಗ್ರಾಮಗಳಿಂದ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಮಧ್ಯಾಹ್ನ 3ರಿಂದ 5ರ ಅವಧಿಯಲ್ಲಿ ಬಸ್‌ಗಳು ಇಲ್ಲದೆ ಪರದಾಡುವ ಸ್ಥಿತಿ ಇಲ್ಲಿದೆ. ಬಸ್‌ಗಾಗಿ ವಿಚಾರಣೆ ಮಾಡಿದರೆ ಘಟಕದ ವ್ಯವಸ್ಥಾಪಕರು ಸಿಬ್ಬಂದಿ ಕೊರತೆ ನೆಪ ಹೇಳಿ ಪ್ರಯಾಣಿಕರ ಬಾಯಿ ಮುಚ್ಚಿಸುತ್ತಾರೆ ಎಂದು ಪ್ರಯಾಣಿಕ ಎಸ್.ಬಿ.ಸುರೇಶ್‌ಜೈನ್‌ ಆರೋಪಿಸಿದರು.

‘ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುವುದಕ್ಕೆ ಆಸನಗಳು ಸಮರ್ಪಕವಾಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ವಸಂತ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಶೀಘ್ರದಲ್ಲೇ ಕ್ರಮ: ವ್ಯವಸ್ಥಾಪಕ

‘ಪ್ರತಿ ದಿನ ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಸಾಲಿಗ್ರಾಮ ಬಸ್ ನಿಲ್ದಾಣದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಲು ಸಕಾಲಕ್ಕೆ ಬಸ್‌ಗಳು ಬರುತ್ತಿಲ್ಲ ಎಂಬ ಮಾಹಿತಿ ಇದೆ. ಈ ಅವಧಿಯಲ್ಲಿ ಯಾವ ಘಟಕಗಳಿಂದ ಬಸ್‌ಗಳು ಓಡಾಡಬೇಕಿದೆ ಎಂಬುದನ್ನು ನೋಡಿಕೊಂಡು ಆ ಘಟಕದ ವ್ಯವಸ್ಥಾಪಕರಿಗೆ ಪತ್ರ ಬರೆದು ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಕೋರುವೆ’ ಎಂದು ಕೆ.ಆರ್. ನಗರ ಘಟಕದ ವ್ಯವಸ್ಥಾಪಕ ಎ.ಡಿ.ಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.