ADVERTISEMENT

ಸರಗೂರು ಪಟ್ಟಣ: ಅನೈರ್ಮಲ್ಯದ್ದೇ ಪ್ರಾಬಲ್ಯ

ಶೌಚಾಲಯ ಇದ್ದರೂ ಉಪಯೋಗಿಸದ ಸಾರ್ವಜನಿಕರು, ನದಿಯ ಒಡಲು ಸೇರುತ್ತಿದೆ ಕೊಳಚೆ

ಎಸ್.ಆರ್.ನಾಗರಾಮ
Published 30 ಡಿಸೆಂಬರ್ 2019, 11:03 IST
Last Updated 30 ಡಿಸೆಂಬರ್ 2019, 11:03 IST
ಕಪಿಲಾ ನದಿಗೆ ಗ್ರಾಮದ ಚರಂಡಿ ನೀರು ಸೇರುತ್ತಿರುವುದು
ಕಪಿಲಾ ನದಿಗೆ ಗ್ರಾಮದ ಚರಂಡಿ ನೀರು ಸೇರುತ್ತಿರುವುದು   

ಸರಗೂರು: ವಾರ್ಡ್‌ಗಳಲ್ಲಿ ಸ್ವಚ್ಛತೆಯ ಕೊರತೆ, ಬಳಕೆಯಾಗದ ಸಮುದಾಯ ಶೌಚಾಲಯಗಳು. ಮುಖ್ಯರಸ್ತೆ ಬದಿಯಲ್ಲೇ ಬೆಳೆದ ಗಿಡಗಂಟಿ. ರಸ್ತೆ ಬದಿಯಲ್ಲೇ ಮಲ, ಮೂತ್ರ ವಿಸರ್ಜನೆ. ಚರಂಡಿ ಮೂಲಕ ಕಪಿಲಾ ನದಿಯ ಒಡಲು ಸೇರುತ್ತಿರುವ ಕೊಳಚೆ...

ಇದು ಸರಗೂರು ಪಟ್ಟಣ ವ್ಯಾಪ್ತಿಯಲ್ಲಿ ಕಂಡು ಬರುವ ಸ್ವಚ್ಛತೆ ಸಮಸ್ಯೆಗಳ ಸರಮಾಲೆ.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಮುಖ್ಯ ರಸ್ತೆ ಬದಿ ಇರುವ ಕಸದ ರಾಶಿಗಳಲ್ಲಿ ಆಹಾರ ಅರಸುವ ಜಾನುವಾರುಗಳು ಅದರಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳನ್ನು ಚೆಲ್ಲಾಡಿ ಅನೈರ್ಮಲ್ಯ ಉಂಟು ಮಾಡುತ್ತಿವೆ. ಪ್ರತಿದಿನ ಕಸ ತೆರವುಗೊಳಿಸದೇ ಇರುವುದರಿಂದ ಪಟ್ಟಣ ಅನೈರ್ಮಲ್ಯದಿಂದ ಕೂಡಿ ರೋಗಗಳು ಹರಡುವಸಾಧ್ಯತೆ ಹೆಚ್ಚಿದೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದೇ ಈ ಸಮಸ್ಯೆಗಳಿಗೆ ಕಾರಣ ಎನ್ನುವುದು ಸ್ಥಳೀಯರ ಆರೋಪ.

ADVERTISEMENT

ಸರಗೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ‘ಸ್ವಚ್ಛ ಸರಗೂರು’ ಪಟ್ಟಣವನ್ನಾಗಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ, ಕಸದ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ.

‘ಕಸ ಸಂಗ್ರಹಕ್ಕೆ ಒಂದು ಟ್ರಾಕ್ಟರ್‌ ಮಾತ್ರ ಇದೆ. ತಿಂಗಳೊಳಗೆ ಮೂರು ಟಿಪ್ಪರ್‌ಗಳು ಬರಲಿದ್ದು, ಬಳಿಕ ಸಮಸ್ಯೆ ನಿವಾರಣೆಯಾಗಲಿದೆ‘ ಎನ್ನುತ್ತಾರೆ ಸರಗೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀಣಾ.

ನಿತ್ಯ ಕಸ ಸಂಗ್ರಹ ಮಾಡಲು ವರ್ತಕ ಮಂಡಳಿ, ಲಯನ್ಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ ವತಿಯಿಂದ ಪಟ್ಟಣ ಪಂಚಾಯಿತಿಗೆ 5 ವರ್ಷಗಳ ಹಿಂದೆ ‘ಪುಷ್‌ಕಾರ್ಟ್‌’ಗಳನ್ನು ನೀಡಲಾಗಿತ್ತು. ಆದರೆ, ಅವುಗಳ ಅಸ್ತಿತ್ವವೇ ಈಗ ಇಲ್ಲವಾಗಿದೆ.

ಚರಂಡಿಯಲ್ಲಿ ಹೂಳು: ಚರಂಡಿ ಯಲ್ಲಿಗಿಡಗಂಟಿ ಬೆಳೆದಿದ್ದು, ಅದನ್ನು ಸ್ವಚ್ಛಗೊಳಿಸುತ್ತಿಲ್ಲ. ಚರಂಡಿಯಲ್ಲಿ ಹೂಳು ತುಂಬಿ ಕೊಳಚೆ ನೀರು ಕಟ್ಟಿಕೊಳ್ಳುತ್ತಿದೆ. ಇದರಿಂದ ಮನೆಗಳಲ್ಲಿ ಸೊಳ್ಳೆಗಳು ಹೆಚ್ಚಿದ್ದು, ಜನರಲ್ಲಿ ರೋಗಭೀತಿ ಮೂಡಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡೇ ತಿರುಗಾಡ ಬೇಕಿದೆ. ಕೆಲವು ವಾರ್ಡ್‌ಗಳ ಮನೆಗಳಲ್ಲಿ ಶೌಚಾಲಯದ ಗುಂಡಿ ತೆಗೆಸಿಲ್ಲ. ಮಲ ಮಿಶ್ರಿತ ನೀರನ್ನುಚರಂಡಿಗೆ ಬಿಡಲಾಗುತ್ತಿದೆ. ಈ ಚರಂಡಿ ನೀರು ಕಪಿಲಾ ನದಿಯನ್ನು ಕಲುಷಿತಗೊಳಿಸುತ್ತಿದೆ.

‘ಶೌಚಾಲಯದ ನೀರನ್ನು ಚರಂಡಿಗೆ ಬಿಡುತ್ತಿರುವವರಿಗೆ ಹಲವಾರು ಬಾರಿ ಎಚ್ಚರಿಸಲಾಗಿದೆ. ಆದರೂ ಅವರು ಗುಂಡಿ ತೆಗೆಸಿಲ್ಲ. ಪಟ್ಟಣ ಪಂಚಾಯಿತಿಯಿಂದ ₹ 5 ಸಾವಿರವನ್ನು ಸಹಾಯಧನವನ್ನಾಗಿ ನೀಡಲಾಗುತ್ತಿದ್ದರೂ ಯಾರೂ ಮುಂದೆ ಬರುತ್ತಿಲ್ಲ. ಇನ್ನು ಮುಂದೆ ಚರಂಡಿಗೆ ಶೌಚಾಲಯದ ನೀರನ್ನು ಬಿಟ್ಟರೆ ‘ಎಂಡ್‌ ಕ್ಯಾಪ್‌’ ಹಾಕುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀಣಾ, ಆರೋಗ್ಯಾಧಿಕಾರಿ ನೇತ್ರಾವತಿ ಎಚ್ಚರಿಸಿದ್ದಾರೆ.

ಸಂತೆಮಾಳದ ಕಪಿಲಾ ನದಿಗೆ ಹೋಗುವ ರಸ್ತೆಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣವಾಗಿದೆ. ಶೌಚಾಲಯ ಬಳಕೆಗೆ ₹ 2 ನಿಗದಿ ಪಡಿಸಿದ್ದು, ಯಾರೂ ಶೌಚಾಲಯ ಬಳಸುತ್ತಿಲ್ಲ. ರಸ್ತೆ ಬದಿಯಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಚರಂಡಿಯ ಕೊಳಚೆ ನೀರಿನ ದುರ್ವಾಸನೆಯಿಂದ ಅಂಗಡಿಯಲ್ಲಿ ವ್ಯಾಪಾರ ಮಾಡಲು ಆಗುತ್ತಿಲ್ಲ. ‘ಮಾಸ್ಕ್’ ಹಾಕಿಕೊಂಡು ಇರಬೇಕಿದೆ. ಚರಂಡಿಯ ಗಬ್ಬು ವಾಸನೆಯಿಂದ ಆರೋಗ್ಯ ಹದಗೆಡುತ್ತಿದ್ದು, ರಾತ್ರಿವೇಳೆ ಸೊಳ್ಳೆಗಳ ಕಾಟ ಹೆಚ್ಚಿದೆ. ಜೆಎಸ್‌ಎಸ್‌ ಶಾಲೆ ಮುಂಭಾಗದ ರಸ್ತೆ, ಜಾಮಿಯ ಮಸೀದಿ ರಸ್ತೆ, 9 ಮತ್ತು 10ನೇ ವಾರ್ಡ್‌ಗಳಿಗೆ ಸೇರಿದ ಪ್ರದೇಶದಲ್ಲಿ ರಸ್ತೆ ಪಕ್ಕದಲ್ಲೇ ಮಲ ವಿಸರ್ಜನೆ ಮಾಡುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಒಂದನೇ ಮುಖ್ಯರಸ್ತೆಯಿಂದ ಕಪಿಲಾ ಬಲದಂಡೆ ನಾಲೆವರೆಗಿನ ಡಾಂಬರು ರಸ್ತೆಯೂ ಕಿತ್ತುಹೋಗಿದ್ದು, ಹೊಂಡಮವಾಗಿದೆ. ವಾಹನ ಸವಾರರು, ಶಾಲೆ ಮಕ್ಕಳು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಡಾಂಬರು ರಸ್ತೆ ನಿರ್ಮಾಣಕ್ಕೆ ಶಾಸಕ ಸಿ.ಅನಿಲ್‌ಕುಮಾರ್ ಭೂಮಿಪೂಜೆ ನೆರವೇರಿಸಿದ್ದು, ಇದಕ್ಕಾಗಿ ₹ 90 ಲಕ್ಷ ಬಿಡುಗಡೆ ಮಾಡಿಸಿದ್ದಾರೆ. ಆದರೆ ಇನ್ನೂ ಕೆಲಸ ಆರಂಭವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.