ADVERTISEMENT

ಸರಗೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ನೇಹ ಸಂಗಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:39 IST
Last Updated 19 ಜನವರಿ 2026, 4:39 IST
ಸರಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಭಾನುವಾರ ಆಯೋಜಿಸಿದ್ದ ಸ್ನೇಹ ಸಂಗಮ, ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರ ಜೊತೆ ಹಳೆಯ ವಿದ್ಯಾರ್ಥಿಗಳು ಇದ್ದಾರೆ
ಸರಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಭಾನುವಾರ ಆಯೋಜಿಸಿದ್ದ ಸ್ನೇಹ ಸಂಗಮ, ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರ ಜೊತೆ ಹಳೆಯ ವಿದ್ಯಾರ್ಥಿಗಳು ಇದ್ದಾರೆ   

ಸರಗೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1989-90ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದಿದ ವಿದ್ಯಾರ್ಥಿಗಳಿಂದ 35 ವರ್ಷಗಳ ನಂತರ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಭಾನುವಾರ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ವೇದಿಕೆವರೆಗೂ ಭವ್ಯ ಸ್ವಾಗತ ನೀಡುವುದರ ಮೂಲಕ ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಗೌರವ ಸಲ್ಲಿಸಿ ಬರಮಾಡಿಕೊಂಡರು. ನಂತರ ವಂದಿಸಿದರು. ಇದಲ್ಲದೆ ತಾವುಗಳು ಓದಿದ ಶಾಲೆಯ ದಿನಗಳನ್ನು ನೆನಪಿಸಿಕೊಂಡು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿ ಬಿಡುಗಲು ಪಡುವಲು ವಿರಕ್ತಮಠದ ಮಹದೇವ ಸ್ವಾಮೀಜಿ ಮಾತನಾಡಿ, ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ, ಬದುಕಿಗೆ ಬೆಳಕಾದ ಪ್ರಾಥಮಿಕ, ಪ್ರೌಢಶಾಲಾ, ಪಿಯು ಶಿಕ್ಷಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಗುರುಗಳು ಕಲಿಸಿಕೊಟ್ಟ ದಾರಿಯಲ್ಲಿ ನಡೆದು ಜೀವನದಲ್ಲಿ ಸಾಧನೆ ಮಾಡಿದಾಗ ಮಾತ್ರ ಕಲಿಸಿದ ವಿದ್ಯೆ ಸಾರ್ಥಕವಾಗಲಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಪ್ರತಿಯೊಬ್ಬರೂ ಗುರು ಋಣ, ಪಿತೃ ಋಣವನ್ನು ಸಾಕಷ್ಟು ತೀರಿಸುವ ಕಾರ್ಯ ಮಾಡಬೇಕು. ಗುರುಗಳಿಂದ ಪಾಠ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿರುವುದು ಗುರುಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದು ಹೇಳಿದರು.

ಗೌರವ ಸಮರ್ಪಣೆ: ಸರ್ಕಾರಿ ಪ್ರಾಥಮಿಕ, ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಕಲಿಸಿದ 25 ಮಂದಿ ಶಿಕ್ಷಕರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಂ.ಎಲ್. ರಾಮನರಸಿಂಹ, ‘35 ವರ್ಷ ಕಳೆದ ಮೇಲೆ ನಮ್ಮನ್ನು ಹುಡುಕಿ ಇಂದು ಸನ್ಮಾನಿಸಿರುವುದು ಸಾಮಾನ್ಯದ ವಿಷಯವಲ್ಲ, ನೀವು ಒಳ್ಳೆಯ ವಾತಾವರಣದಲ್ಲಿ ಬೆಳೆದಿದ್ದೀರ, ನಿಮ್ಮಲ್ಲಿ ಇರುವ ಒಳ್ಳೆಯ ಗುಣವನ್ನು ನಿಮ್ಮ ಮಕ್ಕಳಿಗೆ ಕಲಿಸಿ’ ಎಂದರು.

25 ಮಂದಿ ಶಿಕ್ಷಕರಲ್ಲಿ ಇಪ್ಪತ್ತು ಮಂದಿ ತಮ್ಮ ವೃತ್ತಿ ಬದುಕು ಇಲ್ಲಿಂದಲೇ ಪ್ರಾರಂಭವಾಗಿತ್ತೆಂದು ನೆನಪಿಸಿಕೊಂಡರು. 

ಹಳೆದ ವಿದ್ಯಾರ್ಥಿಗಳಾದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್, ಬಾಬು, ಡಾ.ಸೋಮಣ್ಣ, ಡಾ.ಟಿ.ರವಿಕುಮಾರ್, ಡಾ.ರಾಮ ದಾಸ್, ಡಿವೈಎಸ್ಪಿ ರಾಜಣ್ಣ, ಬಿಇಒ ಮಹದೇವ್, ಇದಾಯತ್, ಕೃಷ್ಣಕುಮಾರ್, ಎಸ್.ಎಚ್. ಗೋವಿಂದರಾಜು, ಎಸ್.ಆರ್.ಜಗದೀಶ್, ರೇಖಾ, ರೇಣುಕಾ, ಚಂದ್ರಕುಮಾರ್, ಮಹದೇವಶೆಟ್ಟಿ, ಪ್ರಸನ್ನ, ಎಸ್.ಕೆ.ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.