ADVERTISEMENT

ಮೈಸೂರು: ರಂಗಾಯಣ ಉಳಿಸಿ; ರಾಜ್ಯವ್ಯಾಪಿ ಹೋರಾಟಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 9:05 IST
Last Updated 25 ಡಿಸೆಂಬರ್ 2021, 9:05 IST

ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ‘ರಂಗಾಯಣ ಉಳಿಸಿ ಹೋರಾಟ ಸಮಿತಿ’ ನಿರ್ಧರಿಸಿದೆ.

‘ರಾಜ್ಯದ ವಿವಿಧ ಕಡೆಗಳಿಂದ ಕಲಾವಿದರು, ಹೋರಾಟಗಾರರು ನಮಗೆ ಬೆಂಬಲ ಸೂಚಿಸುತ್ತಿದ್ದು, ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಿಮ್ಮ ಜತೆ ನಾವೂ ಇದ್ದೇವೆ ಎನ್ನುತ್ತಿದ್ದಾರೆ. ಆದ್ದರಿಂದ ಈ ಹೋರಾಟವನ್ನು ರಾಜ್ಯದಾದ್ಯಂತ ವ್ಯವಸ್ಥಿತವಾಗಿ ನಡೆಸುತ್ತೇವೆ’ ಎಂದು ಹೋರಾಟಗಾರ ಪ.ಮಲ್ಲೇಶ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರ ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ. ‘ರಂಗಾಯಣ ಉಳಿಸಿ’ ವಿಷಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಲು ತೀರ್ಮಾನಿಸಿದ್ದೇವೆ. ಬೆಂಗಳೂರು, ಧಾರವಾಡ, ಶಿವಮೊಗ್ಗ ಮತ್ತು ದಾವಣಗೆರೆಯಿಂದಲೂ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ರಾಜ್ಯಕ್ಕೆ ತಿಳಿಯಪಡಿಸುತ್ತೇವೆ’ ಎಂದರು.

ADVERTISEMENT

ಸಿಎಂಗೆ ಮನವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಮೈಸೂರಿಗೆ ಭೇಟಿ ನೀಡಲಿದ್ದು, ರಂಗಾಯಣದ ನಿರ್ದೇಶಕರನ್ನು ವಜಾಗೊಳಿಸುವಂತೆ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಆರನೇ ದಿನಕ್ಕೆ: ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ರಂಗಾಯಣದ ಮುಂಭಾಗ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.