ADVERTISEMENT

ಮಕ್ಕಳ ವೈಜ್ಞಾನಿಕ ಮನೋಭಾವ ಅನಾವರಣ: ರಾಹುಲ್ ಅಗರ್ವಾಲ್‌

ಲಲಿತ ಪ್ರೌಢಶಾಲೆಯಲ್ಲಿ ಮಾದರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 13:03 IST
Last Updated 2 ಡಿಸೆಂಬರ್ 2022, 13:03 IST
ಮೈಸೂರಿನ ಲಲಿತ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್‌ ಹಾಗೂ ವಿಭಾಗದ ಮಹಿಳಾ ಕಲ್ಯಾಣ ಸಮಿತಿಯ ಅಧ್ಯಕ್ಷೆ ಪೂಜಾ ಅಗರ್ವಾಲ್‌ ವೀಕ್ಷಿಸಿದರು
ಮೈಸೂರಿನ ಲಲಿತ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್‌ ಹಾಗೂ ವಿಭಾಗದ ಮಹಿಳಾ ಕಲ್ಯಾಣ ಸಮಿತಿಯ ಅಧ್ಯಕ್ಷೆ ಪೂಜಾ ಅಗರ್ವಾಲ್‌ ವೀಕ್ಷಿಸಿದರು   

ಮೈಸೂರು: ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಮಿತಿಯ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಲಿತ ಪ್ರೌಢಶಾಲೆಯಲ್ಲಿ (ಅನುದಾನರಹಿತ) ವಿಜ್ಞಾನ ದಿನಾಚರಣೆಯನ್ನು ಶುಕ್ರವಾರ ನಡೆಸಲಾಯಿತು.

ಶಾಲೆಯ ನರ್ಸರಿಯಿಂದ 10ನೇ ತರಗತಿಯ ವಿದ್ಯಾರ್ಥಿ–ವಿದ್ಯಾರ್ಥಿನಿಯರು 60 ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ, ಪರಿಸರ ನಾಶದಿಂದ ಆಗುವ ವಿನಾಶಗಳು, ಜಾಗತಿಕ ತಾಪಮಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಮೊದಲಾದ ವಿಷಯಗಳನ್ನು ಆಧರಿಸಿದ್ದ ಮಾದರಿಗಳು ಗಮನಸೆಳೆದವು.

ಶತಮಾನಗಳು ಕಳೆದಂತೆ ಮಾನವ ಹೇಗೆ ಅಭಿವೃದ್ಧಿ ಹೊಂದಿದ್ದಾನೆ ಎಂಬುದನ್ನು ವಿದ್ಯಾರ್ಥಿಗಳು ಮಾದರಿಗಳ ಮೂಲಕ ತಿಳಿಸಲು ಪ್ರಯತ್ನಿಸಿ, ವೈಜ್ಞಾನಿಕ ಮನೋಭಾವವನ್ನು ಪ್ರದರ್ಶಿಸಿದರು.

ADVERTISEMENT

ನೈರುತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್‌ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾದರಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ನಂತರ ಮಾತನಾಡಿ, ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಅನ್ವೇಷಣೆಗಳನ್ನು ಮಾಡುವ ಹುಮ್ಮಸ್ಸು ಬೆಳೆಸಿಕೊಳ್ಳಬೇಕು. ಯುವ ವಿಜ್ಞಾನಿಗಳ ಸಾಧನೆಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹಿಳಾ ಕಲ್ಯಾಣ ಸಮಿತಿಯ ಅಧ್ಯಕ್ಷೆಪೂಜಾ ಅಗರ್ವಾಲ್‌ ಮಾತನಾಡಿ, ‘ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರು ಬಹು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು. ಅದರಲ್ಲೂ ಸಮಾಜದ ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಸಲಹೆ ನೀಡಿದರು.

ವಿಭಾಗೀಯ ವ್ಯವಸ್ಥಾಪಕ ವಿನಾಯಕ್ ಆರ್.ಆರ್. ನಾಯಕ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಈ.ವಿಜಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.