ADVERTISEMENT

ವಿಜ್ಞಾನದ ಆಳ ಅಧ್ಯಯನ ಅಗತ್ಯ: ಪ್ರೊ.ಜೆ.ಶಶಿಧರ ಪ್ರಸಾದ್ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮೇ 2019, 11:41 IST
Last Updated 20 ಮೇ 2019, 11:41 IST
ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ವಾರದ ವಿಜ್ಞಾನ ಕಾರ್ಯಾಗಾರವನ್ನು ಮೈಸೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಉದ್ಘಾಟಿಸಿದರು. ಕುವೆಂಪು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ಸದಸ್ಯೆ ಡಾ.ಭಾಗ್ಯಲಕ್ಷ್ಮೀ ಇದ್ದಾರೆ
ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ವಾರದ ವಿಜ್ಞಾನ ಕಾರ್ಯಾಗಾರವನ್ನು ಮೈಸೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಉದ್ಘಾಟಿಸಿದರು. ಕುವೆಂಪು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ಸದಸ್ಯೆ ಡಾ.ಭಾಗ್ಯಲಕ್ಷ್ಮೀ ಇದ್ದಾರೆ   

ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳಾಗಿದ್ದು,ವಿಜ್ಞಾನವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ ಮಾತ್ರ ತಂತ್ರಜ್ಞಾನದ ಸುಧಾರಣೆ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ವಿಶ್ಲೇಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿಯು ಹಮ್ಮಿಕೊಂಡಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ವಾರದ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜೀವ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಶಾಲೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಕ್ಕಳಿಗೆ ಕಲಿಸುವ ಯೋಜನೆಯನ್ನು ಜಾರಿಗೊಳಿಸಿದರು. ಅವರಿಗೆ ಈ ವಿಷಯಗಳ ಮಹತ್ವದ ಬಗ್ಗೆ ಅರಿವಿತ್ತು. ಇದಕ್ಕೂ ಮುಂಚೆ ವಿಜ್ಞಾನವೆಂದರೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಎಂದು ಮಾತ್ರ ತಿಳಿದುಕೊಂಡಿದ್ದ ವಿದ್ಯಾರ್ಥಿ ಸಮುದಾಯ, ಮೂಲ ವಿಜ್ಞಾನದ ಕಡೆಗೂ ಗಮನ ನೀಡಲು ಆರಂಭಿಸಿತು ಎಂದು ಅವರು ಸ್ಮರಿಸಿದರು.

ADVERTISEMENT

ಚೀನಾ ಈ ವಿಚಾರದಲ್ಲಿ ಭಾರತವನ್ನು ಮೀರಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಮೆರಿಕಕ್ಕಿಂತಲೂ ಸಾಧನೆ ಮಾಡಿದೆ. ಈ ಕೆಲಸ ಈಗ ಭಾರತದಿಂದ ಆಗಬೇಕು. ಇಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.

ವಿಜ್ಞಾನವನ್ನು ಪ್ರಯೋಗ ಮಾಡಿ ತಿಳಿದುಕೊಳ್ಳಬೇಕೇ ಹೊರತು, ಕಂಠಪಾಠ ಮಾಡಿದರೆ ಆಗದು. ಹಾಗಾಗಿ, ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳನ್ನು ಪ್ರಯೋಗಶಾಲೆಗೆ ಕರೆತಂದು ವಿಜ್ಞಾನದ ವಿಸ್ಮಯಗಳನ್ನು ತಿಳಿಸಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರಲು ವೇದಿಕೆಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿಯು ಗಂಭೀರ ಪ್ರಯತ್ನ ಮಾಡಿದೆ ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ಪ್ರೌಢಶಾಲೆಗಳ ಒಟ್ಟು 35 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಸಸ್ಯವಿಜ್ಞಾನ ಹಾಗೂ ಪ್ರಾಣಿವಿಜ್ಞಾನ ಪ್ರಯೋಗಗಳನ್ನು ಮಕ್ಕಳಿಗೆ ಪ್ರಸ್ತುತಪಡಿಸಲಾಗುವುದು.

ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ಸದಸ್ಯೆ ಡಾ.ಭಾಗ್ಯಲಕ್ಷ್ಮೀ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.