ADVERTISEMENT

ಮೈಸೂರು: ಹೊಸ ವರ್ಷಕ್ಕೆ ಬರಲಿದೆ ‘ಮತ್ಸ್ಯ ದರ್ಶಿನಿ’

ಹಳೇ ಜಿಲ್ಲಾಧಿಕಾರಿ ಕಚೇರಿ ಕ್ಯಾಂಟೀನ್ ಕಟ್ಟಡದಲ್ಲಿ ರೆಸ್ಟೋರೆಂಟ್ ಮಾದರಿ ಸೇವೆ

ಆರ್.ಜಿತೇಂದ್ರ
Published 16 ನವೆಂಬರ್ 2025, 5:43 IST
Last Updated 16 ನವೆಂಬರ್ 2025, 5:43 IST
   

ಮೈಸೂರು: ನಗರದ ಮತ್ಸ್ಯ ಖಾದ್ಯ ಪ್ರಿಯರಿಗೆ ಖುಷಿಯ ಸುದ್ದಿ ಇಲ್ಲಿದೆ. ಕರಾವಳಿ ಶೈಲಿಯ ಮೀನಿನ ಬಗೆಬಗೆಯ ಅಡುಗೆಗಳನ್ನು ಉಣಬಡಿಸುವ ‘ಮತ್ಸ್ಯದರ್ಶಿನಿ’ ಕೇಂದ್ರ ಸದ್ಯದಲ್ಲೇ ತಲೆಎತ್ತಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ತವರೂರಿಗೆ ‘ಮತ್ಸ್ಯದರ್ಶಿನಿ’ಯ ಕೊಡುಗೆ ನೀಡಿದ್ದು, ₹50 ಲಕ್ಷ ಅನುದಾನವನ್ನೂ ಘೋಷಿಸಿದ್ದರು. ಯೋಜನೆಗೆ ಒಟ್ಟು ₹80 ಲಕ್ಷ ವೆಚ್ಚ ಅಂದಾಜಿಸಿದ್ದು, ಉಳಿದ ₹30 ಲಕ್ಷವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಭರಿಸಲಿದೆ.

ಹಳೇ ಜಿಲ್ಲಾಧಿಕಾರಿ ಕಚೇರಿಯ ಕ್ಯಾಂಟೀನ್‌ ಕಟ್ಟಡವು ಸದ್ಯ ನಿರುಪಯುಕ್ತವಾಗಿದ್ದು, ಅಲ್ಲಿಯೇ ರೆಸ್ಟೋರೆಂಟ್ ರೂಪ ಪಡೆಯಲಿದೆ. ಈಗಾಗಲೇ ಜಿಲ್ಲಾಡಳಿತವು ಕಟ್ಟಡವನ್ನು ಮಂಡಳಿಗೆ ಹಸ್ತಾಂತರಿಸಿದೆ. ನವೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದ್ದು, 15 ದಿನದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ADVERTISEMENT

ರೆಸ್ಟೋರೆಂಟ್ ಮಾದರಿ: ‘ಖಾಸಗಿ ಹೋಟೆಲ್‌–ರೆಸ್ಟೋರೆಂಟ್ ಮಾದರಿಯಲ್ಲೇ ಕೇಂದ್ರವನ್ನು ರೂಪಿಸಲಾಗುತ್ತಿದ್ದು, ಗ್ರಾಹಕರನ್ನು ಖಂಡಿತ ಆಕರ್ಷಿಸಲಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್.

ಎರಡು ಮಹಡಿಗಳನ್ನು ಕಟ್ಟಡವು ಒಳಗೊಳ್ಳಲಿದ್ದು, ಏಕಕಾಲದಲ್ಲಿ 80ರಿಂದ 100 ಜನ ಕುಳಿತು ಆಹಾರ ಸವಿಯುವಂತೆ ವಿನ್ಯಾಸಗೊಳಿಸಲಾಗಿದೆ. ಆಸನಗಳ ವ್ಯವಸ್ಥೆ, ಒಳಾಂಗಣದಲ್ಲಿ ಹವಾನಿಯಂತ್ರಿತ ಕೊಠಡಿ, ಹಿಂಭಾಗದಲ್ಲಿ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯಗಳು ಇರಲಿವೆ.

ಕೈಗೆಟಕುವ ದರ: ಮೀನುಗಾರಿಕೆ ಮಂಡಳಿಯ ಉಸ್ತುವಾರಿಯಲ್ಲಿ ಕೇಂದ್ರವು ನಡೆಯಲಿದ್ದು, ಬೆಲೆಯೂ ಗ್ರಾಹಕರ ಕೈಗೆ ಎಟಕುವಂತೆ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಕೇಂದ್ರ ಆರಂಭವಾದಲ್ಲಿ ಖಾದ್ಯಪ್ರಿಯರಿಗೆ ಉತ್ತಮ ಬಜೆಟ್‌ನಲ್ಲಿ ವೈವಿಧ್ಯಮಯ ಆಹಾರ ಸಿಗಲಿದೆ. ಜೊತೆಗೆ ಮೈಸೂರಿಗೆ ಬರುವ ಪ್ರವಾಸಿಗರಿಗೂ ಉತ್ತಮ ಸೌಲಭ್ಯ ಸಿಗಲಿದ್ದು, ಪ್ರವಾಸೋದ್ಯಮಕ್ಕೂ ಪೂರಕವಾಗಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.