ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಶನಿವಾರದಿಂದ ಆರಂಭಗೊಳ್ಳಲಿದ್ದು, ಪ್ರಾಂಶುಪಾಲ ಸೋಮಣ್ಣ ಸಮ್ಮುಖದಲ್ಲಿ ಸಿಬ್ಬಂದಿಯು ಡೆಸ್ಕ್‌ಗಳ ಮೇಲೆ ನೋಂದಣಿ ಸಂಖ್ಯೆ ನಮೂದಿಸಿದರು
– ಪ್ರಜಾವಾಣಿ ಚಿತ್ರ
ಮೈಸೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶನಿವಾರದಿಂದ ಆರಂಭಗೊಳ್ಳಲಿದ್ದು, ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಫೆ.28ರಿಂದ ಮಾರ್ಚ್ 17ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಲಿದೆ. ನಗರದಲ್ಲಿ 28 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 23 (ಎಚ್.ಡಿ. ಕೋಟೆ 3, ಪಿರಿಯಾಪಟ್ಟಣ 4, ತಿ.ನರಸೀಪುರ 4, ಕೆ.ಆರ್. ನಗರ 3, ನಂಜನಗೂಡು 5 ಹಾಗೂ ಹುಣಸೂರು 4) ಸೇರಿದಂತೆ ಒಟ್ಟು 51 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಮೊದಲ ದಿನ ಕನ್ನಡ, ಅರೇಬಿಕ್ ವಿಷಯದ ಪರೀಕ್ಷೆ ನಿಗದಿಯಾಗಿದೆ.
ಒಟ್ಟು 35,818 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ (ಹೊಸಬರು 32,835, ಪುನರಾವರ್ತಿತ ಅಭ್ಯರ್ಥಿಗಳು 2,194 ಹಾಗೂ 773 ಖಾಸಗಿ ಅಭ್ಯರ್ಥಿಗಳು). ಪ್ರಶ್ನೆಪತ್ರಿಕೆಗಳನ್ನು ರವಾನಿಸಲು ಜಿಲ್ಲೆಯಲ್ಲಿ 11 ಮಾರ್ಗಗಳನ್ನು ರಚಿಸಲಾಗಿದ್ದು, 33 ಮಂದಿ ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 11 ವಾಹನಗಳನ್ನು ಬಳಸಲಾಗುವುದು. ಒಂದನ್ಜು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಎಲ್ಲ ವಾಹನಗಳಿಗೂ ಜಿಪಿಎಸ್ ಸಾಧನ ಅಳವಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುಖ್ಯ ಅಧೀಕ್ಷಕರು, ಉತ್ತರಪತ್ರಿಕಾಪಾಲಕರು ಹಾಗೂ ಕಚೇರಿ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಮಂಡಳಿಯಿಂದ ‘ಸಹ ಮುಖ್ಯ ಪರೀಕ್ಷಕ’ರನ್ನು ನೇಮಿಸಲಾಗಿದೆ. ನಕಲು ತಡೆಗೆ ವಿಶೇಷ ಜಾಗೃತ ದಳ ನಿಯೋಜಿಸಲಾಗಿದ್ದು, ಪ್ರತಿ ತಾಲ್ಲೂಕಿಗೊಂದು ‘ಫ್ಲೈಯಿಂಗ್ ಸ್ಕ್ವಾಡ್’ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದೆ.
ಈಚೆಗೆ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಮುಖ್ಯಮಂತ್ರಿಯವರ ತವರಾದ ಜಿಲ್ಲೆಯನ್ನು ಫಲಿತಾಂಶ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬರುವಂತೆ ಮಾಡಬೇಕು ಎಂಬ ಗುರಿ ನೀಡಿದ್ದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಗೊಂದಲಕ್ಕೆ ಅವಕಾಶ ಕೊಡಬಾರದು. ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದರು. ಇದರಂತೆ ಇಲಾಖೆಯಿಂದ ತಯಾರಿ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ‘ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಡಿ ವ್ಯವಸ್ಥಿತವಾಗಿ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಠೇವಣಿ ಇಡಲು ಹಾಗೂ ಕೇಂದ್ರಗಳಿಗೆ ವಿತರಿಸುವ ವ್ಯವಸ್ಥೆ ನಿರ್ವಹಿಸಲಾಗುವುದು. ಖಜಾನೆಯ ಹೊರಗೆ ಮತ್ತು ಒಳಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ತಿಳಿಸಿದರು.
‘ಪ್ರತಿ ಮಾರ್ಗಗಳಿಗೂ ಪ್ರಶ್ನೆಪತ್ರಿಕೆ ವಿತರಿಸಲು ತಹಶೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರು ಒಳಗೊಂಡ ತ್ರಿಸದಸ್ಯ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳನ್ನು ವೀಕ್ಷಿಸಲೆಂದು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ 10 ಉಪನ್ಯಾಸಕರ ತಂಡ ರಚಿಸಲಾಗಿದೆ. ಒಬ್ಬ ಪ್ರಾಂಶುಪಾಲರನ್ನು ತಂಡದ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ದಿನದಂದು ಖಜಾನೆಯಿಂದ ಹೊರತೆಗೆಯಲು ಮಾರ್ಗವಾರು ಸಮಯ ನಿಗದಿಪಡಿಸಲಾಗಿದೆ. ಇದೇ ಅವಧಿಯಲ್ಲಿ ಮಾರ್ಗಾಧಿಕಾರಿಗಳು ಪ್ರಶ್ನೆಪತ್ರಿಕೆಗಳನ್ನು ಪಡೆಯುವಂತೆ ನಿರ್ದೇಶನ ನೀಡಲಾಗಿದೆ. ಪ್ರತಿ ಮಾರ್ಗಕ್ಕೂ ತಲಾ ಒಬ್ಬರು ಗನ್‌ಮ್ಯಾನ್ ನಿಯೋಜಿಸಲಾಗಿದೆ’ ಎಂದು ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.