ಮೈಸೂರು: ‘ಅನುಭಾವಿಗಳ ದಾರಿಯಲ್ಲಿ ನಡೆಯುವುದು ಮತ್ತು ಅವರನ್ನು ಅನುಸರಿಸುವುದೇ ನಿಜವಾದ ದರ್ಶನ’ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.
ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರೋಪಾನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ಜೀವನ ದರ್ಶನ’ ವಿಷಯದ ಕುರಿತು ಅವರು ಮಾತನಾಡಿದರು.
‘12ನೇ ಶತಮಾನ ವೈಜ್ಞಾನಿಕ ಮತ್ತು ವೈಚಾರಿಕ ಕಾಲಘಟ್ಟವಾಗಿತ್ತು. ಶರಣ ಚಳವಳಿ ಜೀವಪರ ಕಾಳಜಿಯನ್ನು ಹೊಂದಿತ್ತು. ಧ್ವನಿ ಇಲ್ಲದವರಿಗೆ ಚೈತನ್ಯ ಶಕ್ತಿ ತುಂಬಿತು’ ಎಂದರು.
‘ಶರಣರು ಜಗತ್ತಿಗೆ ಕಾಯಕದ ಮೌಲ್ಯವನ್ನು ತಿಳಿಸಿದ ಅಸ್ತಿತ್ವವಾದಿಗಳು. ವಚನ ಸಾಹಿತ್ಯವು ಅನುಭಾವದಿಂದ ಉದಯಿಸಿದ ಅಮೃತಧಾರೆ. ವಚನಗಳ ಓದು ನಮ್ಮ ವರ್ತಮಾನದ ಬದುಕಿಗೆ ದಿವ್ಯ ಬೆಳಕಾಗಿದ್ದು, ಶಾಂತಿ ಮತ್ತು ಸಮಾಧಾನವನ್ನು ನೀಡುತ್ತದೆ’ ಎಂದು ಪ್ರತಿಪಾದಿಸಿದರು.
ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ ಎಂ. ನಂಜಯ್ಯ ಹೊಂಗನೂರು, ‘ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಆ ಕಾಲಕ್ಕೆ ಚಾಮರಾಜನಗರದಲ್ಲಿ ಕಾಲೇಜು ತೆರೆಯದೇ ಹೋಗಿದ್ದರೆ ನನ್ನಂಥವರು ಪದವಿ ಪಡೆದು ಈ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಸಂಸ್ಥೆಯ ಅಕ್ಷರ ಮತ್ತು ಅನ್ನ ದಾಸೋಹದ ಸೇವೆ ಸ್ಮರಣೀಯವಾದುದು’ ಎಂದರು.
‘ಪ್ರಸಾರಾಂಗವು ಈವರೆಗೆ 9ಲಕ್ಷಕ್ಕೂ ಹೆಚ್ಚಿನ ಕೃತಿಗಳನ್ನು ಮುದ್ರಿಸಿದೆ. ಓದುವ ಸಂಸ್ಕೃತಿ ಪಸರಿಸುವ ದೃಷ್ಟಿಯಿಂದ ಅತಿಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ‘ನಾಡಿಗೆ ಅರಮನೆ ಮತ್ತು ಗುರುಮನೆ ಸಲ್ಲಿಸಿದ ಕೊಡುಗೆ ಅಪಾರವಾದುದು’ ಎಂದು ಸ್ಮರಿಸಿದರು.
‘ಶರಣ ಸಾಹಿತ್ಯ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಲ್ಲಿ ಸಂದೇಶವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ರೇಚಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಹೊನ್ನಶೆಟ್ಟಿ, ಎನ್. ಎಂ. ಕೃಷ್ಣಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.