ADVERTISEMENT

ಗ್ರಾಮೀಣ ಮಕ್ಕಳ ಶಿಕ್ಷಣ ಗಟ್ಟಿಯಾದರೆ ಪ್ರಗತಿ: ಶೆಲ್ವಪಿಳ್ಳೆ ಅಯ್ಯಂಗಾರ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 5:01 IST
Last Updated 31 ಡಿಸೆಂಬರ್ 2025, 5:01 IST
ಹುಣಸೂರು ನಗರದ ಶಾಸ್ತ್ರಿ ಗ್ಲೋಬಲ್‌ ಸ್ಕೂಲ್‌ನಲ್ಲಿ ನಡೆದ ವಸುಧಾ– 2025 ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಶೆಲ್ವಪಿಳ್ಳೆ ಅಯ್ಯಂಗಾರ್‌ ಮಾತನಾಡಿದರು
ಹುಣಸೂರು ನಗರದ ಶಾಸ್ತ್ರಿ ಗ್ಲೋಬಲ್‌ ಸ್ಕೂಲ್‌ನಲ್ಲಿ ನಡೆದ ವಸುಧಾ– 2025 ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಶೆಲ್ವಪಿಳ್ಳೆ ಅಯ್ಯಂಗಾರ್‌ ಮಾತನಾಡಿದರು   

ಹುಣಸೂರು: ‘ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಗಟ್ಟಿಯಾಗಿದ್ದರೆ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ’ ಎಂದು ಮೈಸೂರಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಶೆಲ್ವಪಿಳ್ಳೆ ಅಯ್ಯಂಗಾರ್‌ ಹೇಳಿದರು.

ನಗರದ ಶಾಸ್ತ್ರಿ ಚಾರಿಟಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ವಸುಧಾ –2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ದೇಶದ ಸಮಗ್ರ  ಅಭಿವೃದ್ಧಿಗೆ ಶಿಕ್ಷಣ ಅತಿಮುಖ್ಯ, ಶಿಕ್ಷಣ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಪರಿಸರದ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣ ನೀಡಿ ಸಂಸ್ಕಾರ ಸಂಸ್ಕೃತಿ ಮತ್ತು ಸಂಪ್ರದಾಯ ನೀಡುವಂತಾಗಬೇಕು’ ಎಂದರು.

‘ಮೌಲ್ಯಗಳ ಕೊರತೆಯಿಂದ ಇಂದಿನ ಯುವಪೀಳಿಗೆ ಹಲವು ಬಾಹ್ಯ ಆಕರ್ಷಣೆಗೆ ಒಳಗಾಗಿ ತತ್ವ ಸಿದ್ಧಾಂತದ ವಿರುದ್ಧ ದಿಕ್ಕಿನಲ್ಲಿ ಬೆಳೆದು ಸಮಾಜ ಘಾತುಕರಾಗಲಿದ್ದಾರೆ. ಇದನ್ನು ಪೋಷಕರು ತಡೆಯುವ ಪ್ರಯತ್ನ ಸಂಸ್ಕೃತಿ ಸಂಸ್ಕಾರ ಮತ್ತು ಸಂಪ್ರದಾಯಗಳ ಮೂಲಕ ತಿಳಿ ಹೇಳಿ ಸಕಾರಾತ್ಮಕ ಆಲೋಚನೆಯನ್ನು ಮಗುವಿನ ಮನಸ್ಸಿನಲ್ಲಿ ಬಿತ್ತುವ ಕೆಲಸ ಮನೆ ಹಾಗೂ ಶಾಲೆಗಳಲ್ಲಿ ನಡೆದರೆ ಉತ್ತಮ ಸಮಾಜ ಸೃಷ್ಟಿಸಲು ಸಾಧ್ಯವಾಗಲಿದೆ’ ಎಂದರು.

ADVERTISEMENT

ಸಂಸ್ಥೆಯ ಕಾರ್ಯದರ್ಶಿ ಎಸ್.ರಾಧಾಕೃಷ್ಣ ಮಾತನಾಡಿ, ‘ಸಂಸ್ಥೆ 32 ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕವಾಗಿ ತನ್ನದೇ ಆಯಾಮದಲ್ಲಿ ಮಕ್ಕಳನ್ನು ರೂಪಿಸಿ ಸಮಾಜಕ್ಕೆ ಕೊಡುಗೆ ನೀಡಿ ಸಮಾಜದ ಆಸ್ತಿಯನ್ನಾಗಿಸಿದೆ. ಅದರ ಫಲವಾಗಿ ಇಂದು ವೃತ್ತಿಪರ, ಸಾಮಾಜಿಕ, ಕೃಷಿ ಕ್ಷೇತ್ರ ಒಳಗೊಂಡಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಶಾಸ್ತ್ರಿ ಸಂಸ್ಥೆಯಲ್ಲಿ ಅಕ್ಷರ ಕಲಿತ ಮಕ್ಕಳನ್ನು ಗುರುತಿಸಲು ಸಾಧ್ಯವಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್‌ ಶುಭಾಶಯ ಕೋರಿದರು. ಪ್ರಾಂಶುಪಾಲ ರವಿಶಂಕರ್‌ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಸಚ್ಚಿತ್‌ ವಂದಿಸಿದರು. ವಸುಧಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.