
ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವಕ್ಕೆ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ರಥದ ಮಿಣಿ ಎಳೆದು ಚಾಲನೆ ನೀಡಿದರು
ಸುತ್ತೂರು (ಮೈಸೂರು ಜಿಲ್ಲೆ): ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ 10.30ಕ್ಕೆ ವೀರಸಿಂಹಾಸನ ಮಠದ ಕರ್ತೃಗದ್ದುಗೆ ಆವರಣದಲ್ಲಿ ಶಿವಯೋಗಿಗಳ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 11ಕ್ಕೆ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಈಡುಗಾಯಿ ಒಡೆದು, ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ನಂತರದಲ್ಲಿ ಸಾವಿರಾರು ಭಕ್ತರು ರಥದ ಬೃಹತ್ ಮಿಣಿಯನ್ನು ಎಳೆದು ಹರಕೆ ತೀರಿಸಿದರು.
ಭಕ್ತರು ‘ಹರಹರ ಮಹದೇವ’, ‘ಜೈ ಶಿವರಾತ್ರೀಶ್ವರ’ ಎಂದು ಘೋಷಣೆ ಕೂಗುತ್ತಾ ರಥದ ಮಿಣಿ ಎಳೆದರು. ಕೆಲವರು ದೂರದಿಂದಲೇ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು.
ಭಕ್ತರ ಜಯಘೋಷದ ನಡುವೆ ಸುತ್ತೂರು ಮೂಲಮಠದವರೆಗೂ ಸಾಗಿದ ರಥವು ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಮಧ್ಯಾಹ್ನ 2ರ ಸುಮಾರಿಗೆ ಕರ್ತೃಗದ್ದುಗೆಗೆ ಮರಳಿತು. ರಸ್ತೆಯ ಎರಡೂ ಬದಿಗಳಲ್ಲಿ ಕೈಜೋಡಿಸಿ ನಿಂತ ಭಕ್ತರು ಶಿವರಾತ್ರೀಶ್ವರರಿಗೆ ಮನದಲ್ಲೇ ನಮಿಸಿ ತಮ್ಮ ಹರಕೆ ಸಲ್ಲಿಸಿದರು.
ರಥೋತ್ಸವವು ದಸರಾ ಜಂಬೂಸವಾರಿ ನೆನಪಿಸಿತು. ರಥವು ಸುತ್ತೂರಿನ ರಾಜಬೀದಿಯಲ್ಲಿ ಸಾಗುವಾಗ ತಮಟೆ, ನಗಾರಿ ವಾದ್ಯಗಳ ಸದ್ದು ಮುಗಿಲುಮುಟ್ಟಿತು. 40ಕ್ಕೂ ಹೆಚ್ಚು ಕಲಾ ತಂಡಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಗಮನ ಸೆಳೆದವು. ನಗಾರಿಯ ಸದ್ದಿಗೆ ಕಂಬದ ಗೆಜ್ಜೆಗಳನ್ನು ಝಲ್ಲೆನೆಸುತ್ತಾ ಹೆಜ್ಜೆ ಹಾಕಿದ ಕಲಾವಿದರು, ರಥೋತ್ಸವದ ಮೆರವಣಿಗೆಗೆ ಮುನ್ನುಡಿ ಬರೆದರು. ವೀರಭದ್ರನ ವೇಷದಲ್ಲಿದ್ದ ಲಿಂಗಧೀರರು ನಾದಸ್ವರದ ಸದ್ದಿಗೆ ಹೆಜ್ಜೆ ಹಾಕುತ್ತ ಗಮನ ಸೆಳೆದರು. ತವಿಲ್‌ನ ಲಯ, ನಾದಸ್ವರದ ನಾದದ ಅಲೆ ಕಿವಿದುಂಬಿತ್ತು. ಕಲಾವಿದರಿಂದ ಹೊರಹೊಮ್ಮುತ್ತಿದ್ದ ಸ್ಯಾಕ್ಸೋಪೋನ್ ವಾದನ ಮೋಡಿ ಮಾಡಿತು.
ನಂದಿಧ್ವಜದಿಂದ ಆರಂಭಗೊಂಡು ವೀರಗಾಸೆ, ಡೊಳ್ಳು–ಕಂಸಾಳೆ, ಪಟ ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ಮೊದಲಾದ ಪ್ರದರ್ಶನಗಳು ರಂಜಿಸಿದವು. ಸುತ್ತೂರು ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ತಂಡವು ವೀರಗಾಸೆ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯಿತು. ತಮಟೆ-ನಗಾರಿಯ ಸದ್ದಿಗೆ ಭಕ್ತರು ಹೆಜ್ಜೆ ಹಾಕಿದರು. ಗೊರವರ ಕುಣಿತ, ಕೋಲಾಟ, ಜಾಂಜ್ ಮೇಳ, ಮರಗಾಲು, ಕಂಸಾಳೆ, ಹುಲಿವೇಷ, ಪಟದ ಕುಣಿತ, ದೊಣ್ಣೆವರಸೆ, ಸುತ್ತೂರು ಗ್ರಾಮದವರ ವೀರಮಕ್ಕಳ ಕುಣಿತ ರಥೋತ್ಸವಕ್ಕೆ ಮೆರುಗು ತುಂಬಿತು.
ವ್ಯಾಪಾರ ಜೋರು:
ಶನಿವಾರ ಜಾತ್ರೆಗೆ ಬಂದವರ ಸಂಖ್ಯೆ ಹೆಚ್ಚಿತ್ತು. ವರ್ತಕರು ಉತ್ತಮ ವಹಿವಾಟು ನಡೆಸಿದರು. ಜೊತೆಗೆ ಕೃಷಿ ಮೇಳ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನಗಳು ರಂಜಿಸಿದವು.
ಮೊಳಗಿದ ‘ಹರಹರ ಮಹದೇವ’, ‘ಜೈ ಶಿವರಾತ್ರೀಶ್ವರ’ ಘೋಷಣೆ 40ಕ್ಕೂ ಹೆಚ್ಚು ಕಲಾ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮ
ದೇಸಿ ಆಟಗಳ ರಂಜನೆ ಸುತ್ತೂರು ಜಾತ್ರೆ ಅಂಗವಾಗಿ ಶನಿವಾರ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ವಿವಿಧ ದೇಸಿ ಆಟಗಳ ಸ್ಪರ್ಧೆಗಳು ಗಮನ ಸೆಳೆದವು. ಭಾರ ಎತ್ತುವ ಸ್ಪರ್ಧೆಯಲ್ಲಿ ಬಲಾಢ್ಯರು ಭಾರಿ ತೂಕದ ಕಲ್ಲುಗುಂಡುಗಳನ್ನು ಮೇಲೆತ್ತಿ ಎಸೆಯುತ್ತ ತಮ್ಮ ತೋಳ್ಬಲ ಪ್ರದರ್ಶಿಸಿದರು. ವಿವಿಧ ತಂಡಗಳ ನಡುವೆ ‘ಹಗ್ಗ ಜಗ್ಗಾಟ’ವೂ ನಡೆಯಿತು. ಕೆಸರು ಗದ್ದೆಯ ಒಳಗೆ ಅಖಾಡಕ್ಕೆ ಇಳಿದ ತಂಡಗಳು ಪರಸ್ಪರ ಹಗ್ಗವನ್ನು ಎಳೆಯುತ್ತ ಗೆಲುವಿಗೆ ಸಾಹಸ ನಡೆಸಿದರು. ನಂತರದಲ್ಲಿ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಉತ್ಸಾಹಿಗಳು ಪಾಲ್ಗೊಂಡರು. ಬುಗುರಿ ಬಿಡುವ ಸ್ಪರ್ಧೆಯಲ್ಲೂ ಯುವಕರು ಪಾಲ್ಗೊಂಡರು. ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹಾಗೂ ವಿವಿಧ ಮಠಾಧೀಶರು ಕೆಸರುಗದ್ದೆ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.