ಮೈಸೂರು: ಮಳೆ ಕಾಡಿದ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿದ ನಾಯಕ ಶುಭಾಂಗ್ ಹೆಗ್ಡೆ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಮಹಾರಾಜ ಟ್ರೋಫಿ’ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ತಂಡವು 8 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು.
ಮಳೆಯಿಂದ 6 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಸೋತ ಶಿವಮೊಗ್ಗ ಲಯನ್ಸ್ ನಾಯಕ ನಿಹಾಲ್ ಉಲ್ಲಾಳ್ 11 ಎಸೆತದಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ನೊಂದಿಗೆ 31 ರನ್ ಗಳಿಸಿ ಅಬ್ಬರಿಸಿದರು. ಮೊದಲ ಎರಡು ಓವರ್‌ನಲ್ಲಿ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೇ 34 ಆಗಿತ್ತು. ಈ ವೇಳೆ ದಾಳಿಗಿಳಿದ ಶುಭಾಂಗ್ ಅವರು ಅನೀಶ್ವರ್ ಗೌತಮ್ ಅವರನ್ನು ಬೌಲ್ಡ್ ಮಾಡಿದರು. ನಿಹಾಲ್ ಉಲ್ಲಾಳ್ 3ನೇ ಓವರ್‌ನಲ್ಲಿ ಮೊಹಸೀನ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಅಲ್ಲಿಂದ ಶಿವಮೊಗ್ಗ ತಂಡದವರು ರನ್ ಗಳಿಸಲು ತಿಣುಕಾಡಿದರು.
ಈ ವೇಳೆ ಶುಭಾಂಗ್ ತಮ್ಮ 2ನೇ ಓವರ್‌ನ ಮೊದಲ ಎರಡು ಎಸೆತದಲ್ಲಿ ಅನಿರುದ್ಧ ಜೋಶಿ ಹಾಗೂ ಅವಿನಾಶ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಮೊಹಸಿನ್ ಖಾನ್ (5ಕ್ಕೆ 2) ಹಾಗೂ ಎಂ.ಜಿ.ನವೀನ್ (32ಕ್ಕೆ 2) ಶುಭಾಂಗ್ ಅವರಿಗೆ ಸಾಥ್ ನೀಡಿದರು. ಕೊನೆಯ ಓವರ್‌ನಲ್ಲಿ ಎಂ.ಬಿ.ದರ್ಶನ್ ಅವರ 14 ರನ್ ನೆರವಿನಿಂದ ಶಿವಮೊಗ್ಗ 6 ವಿಕೆಟ್ ನಷ್ಟಕ್ಕೆ 62 ರನ್ ಕಲೆ ಹಾಕಿತು.
ಸವಾಲಿನ ಗುರಿ ಬೆನ್ನತ್ತಿದ್ದ ಬೆಂಗಳೂರು ತಂಡಕ್ಕೆ ಎಲ್.ಆರ್.ಚೇತನ್ (16 ರನ್), ಎ.ರೋಹನ್ ಪಾಟೀಲ (12) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 25 ರನ್ ಕಲೆಹಾಕಿತ್ತು. ಭರ್ಜರಿ ಸಿಕ್ಸರ್ ಸಿಡಿಸಲು ಹೋದ ಚೇತನ್, ಕೌಶಿಕ್ ಅವರಿಗೆ ವಿಕೆಟ್ ಒಪ್ಪಿಸಿದರೆ, ರೋಹನ್ ಅವರು ನಿಹಾಲ್ ಅವರಿಗೆ ಕ್ಯಾಚ್ ನೀಡಿದರು. ಆಗ ಕ್ರೀಸ್‌ಗೆ ಬಂದ ಅನುಭವಿ ಬ್ಯಾಟರ್ ಮಯಂಕ್ ಅಗರವಾಲ್ (ಔಟಾಗದೆ 18; 4x2, 6x1) ಹಾಗೂ ನಾಯಕ ಶುಭಾಂಗ್ ಹೆಗ್ಡೆ (ಔಟಾಗದೆ 14; 6x2) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಜೊತೆಯಾಟದಿಂದ 32 ರನ್ ಹರಿದು ಬಂದವು.
ಶಿವಮೊಗ್ಗ ಲಯನ್ಸ್: 6 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 62 (ನಿಹಾಲ್ ಉಲ್ಲಾಳ್ 31, ಎಂ.ಬಿ.ದರ್ಶನ್ ಔಟಾಗದೆ 14. ಶುಭಾಂಗ್ ಹೆಗ್ಡೆ 7ಕ್ಕೆ 3, ಮೊಹಸಿನ್ ಖಾನ್ 5ಕ್ಕೆ 2, ಎಂ.ಜಿ.ನವೀನ್ 32ಕ್ಕೆ 2, ವಿದ್ಯಾಧರ ಪಾಟೀಲ 16ಕ್ಕೆ 1)
ಬೆಂಗಳೂರು ಬ್ಲಾಸ್ಟರ್ಸ್: 4.2 ಓವರ್‌ಗಳಲ್ಲಿ 2 ವಿಕೆಟ್‌ಗೆ 63 (ಮಯಂಕ್ ಅಗರವಾಲ್ ಔಟಾಗದೆ 18, ಶುಭಾಂಗ್ ಹೆಗ್ಡೆ ಔಟಾಗದೆ 14, ರೋಹಿತ್ 7ಕ್ಕೆ 1, ಕೌಶಿಕ್ 16ಕ್ಕೆ 1) ಪಂದ್ಯದ ಆಟಗಾರ: ಶುಭಾಂಗ್ ಹೆಗ್ಡೆ
ಶಿವಮೊಗ್ಗ ಲಯನ್ಸ್ v/s ಗುಲ್ಪರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3.15
ಮೈಸೂರು: ಕೆ.ವಿ.ಅನೀಶ್ (62) ಮತ್ತು ಮೆಕ್ನೀಲ್ ನೊರೊನಾ (56) ಅವರ ಸೊಗಸಾದ ಅರ್ಧಶತಕ ಹಾಗೂ ಕ್ರಾಂತಿಕುಮಾರ್ ಅವರ ಆಲ್‌ರೌಂಡ್ ಆಟದ (30ರನ್ ಮತ್ತು 28ಕ್ಕೆ 4 ವಿಕೆಟ್) ಬಲದಿಂದ ‘ಮಂಗಳೂರು ಡ್ರ್ಯಾಗನ್ಸ್’ ತಂಡವು ‘ಹುಬ್ಬಳ್ಳಿ ಟೈಗರ್ಸ್’ ತಂಡದ ಎದುರು 16 ರನ್‌ಗಳಿಂದ ಗೆಲುವು ಸಾಧಿಸಿತು.
ಶುಕ್ರವಾರದ ಎರಡನೇ ಪಂದ್ಯದಲ್ಲಿ ಮಂಗಳೂರು ತಂಡವು 5 ವಿಕೆಟ್‌ಗೆ 195 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು. ಉತ್ತರವಾಗಿ ಹುಬ್ಬಳ್ಳಿ ತಂಡವು ನಾಯಕ ದೇವದತ್ತ ಪಡಿಕ್ಕಲ್ (60 ರನ್) ಅರ್ಧಶತಕದಿಂದ 9 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 195 (ಕೆ.ವಿ.ಅನೀಶ್ 62, ಮೆಕ್ನೀಲ್ ನೊರೊನಾ 56, ನಿತಿನ್ ಶಾಂತವೇರಿ 54ಕ್ಕೆ 2). ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 179 (ದೇವದತ್ತ ಪಡಿಕ್ಕಲ್ 60. ಕ್ರಾಂತಿಕುಮಾರ್ 28ಕ್ಕೆ 4)
ಮೈಸೂರು ವಾರಿಯರ್ಸ್ v/s ಹುಬ್ಬಳ್ಳಿ ಟೈಗರ್ಸ್, ಸಂಜೆ 7.15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.