ADVERTISEMENT

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು- ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 4:08 IST
Last Updated 3 ಅಕ್ಟೋಬರ್ 2021, 4:08 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ   

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಮುಖ್ಯಮಂತ್ರಿ ಆಗಬೇಕು ಅನ್ನೋ ಹುಚ್ಚು. ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿಯವರನ್ನು ಹೇಗಾದರೂ ಸೆಳೆದುಕೊಳ್ಳಬೇಕು ಅನ್ನೋ ಹುಚ್ಚು‌ ಇದೆ. ಈ ಇಬ್ಬರೂ ಹುಚ್ಚರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಹುಚ್ಚು ಕನಸಿದೆ. ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದು ಏಕೆ ಎಂಬುದನ್ನು ಅವರು ಮತ್ತೊಮ್ಮೆ ಯೋಚಿಸಲಿ ಎಂದು ಸವಾಲೆಸೆದರು.

ಇಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಹುಚ್ಚು ಇರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದರು.

ADVERTISEMENT

ಸದನದಲ್ಲಿ ಸಿದ್ದರಾಮಯ್ಯ ಜಾತಿಗಣತಿ ವರದಿ ಕುರಿತು ಮಾತನಾಡಲಿಲ್ಲ. ಅವರೇನು ಬಾಯಿಯಲ್ಲಿ ಕಡುಬು ಇಟ್ಟುಕೊಂಡಿದ್ದರಾ ಎಂದು ಪ್ರಶ್ನಿಸಿದ ಅವರು, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲ್ಲ. ಆಗ ನಿಮ್ಮ ಬೆಂಬಲ ವಾಪಸ್ ತೆಗೆದುಕೊಳ್ಳಬೇಕಿತ್ತು. ಇವರಿಗೆ ಜಾತಿಗಣತಿ ವರದಿ ಮುಖ್ಯವಲ್ಲ. ಕೇವಲ ಅಧಿಕಾರವೊಂದೇ ಗುರಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಹಿಂದುಳಿದಿರುವ, ಅಲ್ಪಸಂಖ್ಯಾತರು ಇವರ ಹೆಸರಿಗೆ ಮಾತ್ರನಾ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.