ADVERTISEMENT

ಮೈಸೂರು: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳಿಂದ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:31 IST
Last Updated 30 ಅಕ್ಟೋಬರ್ 2025, 4:31 IST
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಹಿಂದ ಸಂಘಟನೆಗಳು ಪತ್ರ ಚಳವಳಿ ನಡೆಸಿ, ‘ಸಿದ್ದರಾಮಯ್ಯ ಅವರೇ ಐದು ವರ್ಷವೂ ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಕಳುಹಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಹಿಂದ ಸಂಘಟನೆಗಳು ಪತ್ರ ಚಳವಳಿ ನಡೆಸಿ, ‘ಸಿದ್ದರಾಮಯ್ಯ ಅವರೇ ಐದು ವರ್ಷವೂ ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಕಳುಹಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ರಾಮಸ್ವಾಮಿ ವೃತ್ತದಲ್ಲಿರುವ ಅಂಚೆ ಪೆಟ್ಟಿಗೆ ಬಳಿ ಅಹಿಂದ ಸಂಘಟನೆಗಳು ಪತ್ರ ಚಳವಳಿ ನಡೆಸಿ, ‘ಸಿದ್ದರಾಮಯ್ಯ ಅವರೇ ಐದು ವರ್ಷವೂ ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಕಳುಹಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ದೊಡ್ಡ ಮಟ್ಟದ ಗೆಲುವಿಗೆ ಸಿದ್ದರಾಮಯ್ಯ ನಾಯಕತ್ವ ಹಾಗೂ ಅಹಿಂದ ಸಮುದಾಯಗಳ ಒಗ್ಗಟ್ಟು ಕಾರಣ. ಕರ್ನಾಟಕದಲ್ಲಿ ಕಾಂಗ್ರೆಸ್ ನೆಲೆ ತುಂಬಾ ಭದ್ರವಾಗಿರುವುದಕ್ಕೂ ಮೂಲ ಕಾರಣ ಸಿದ್ದರಾಮಯ್ಯ ಆಡಳಿತ, ಹೀಗಾಗಿ ಅವರನ್ನೇ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರನ್ನು ಶಾಸಕರು ಸೇರಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದ್ದಾರೆ. ಆದರೆ, ಈಚೆಗೆ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಹೆಚ್ಚು ಅಪಪ್ರಚಾರ ಮತ್ತು ರಾಜಕೀಯ ಮಾಡುತ್ತಿವೆ. ಮುಖ್ಯಮಂತ್ರಿ ಬದಲಾಯಿಸುತ್ತಾರೆ ಎಂಬ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘ಕಾಂಗ್ರೆಸ್‌ನ ಕೆಲ ನಾಯಕರೂ ವಿರೋಧ ಪಕ್ಷದ ಹೇಳಿಕೆಗೆ ಧ್ವನಿಯಾಗಿದ್ದಾರೆ. ಇದು ಪಕ್ಷದ ಏಳಿಗೆಗೆ ತೊಡಕಾಗಬಹುದು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುತ್ತಾರೆ ಎಂಬ ಅಪಪ್ರಚಾರ ಅಹಿಂದ ಸಮುದಾಯಗಳಿಗೆ ಸಹಿಸಲು ಅಸಾಧ್ಯ. ಹೀಗಾಗಿ ಈ ಕೂಡಲೇ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮಧ್ಯಪ್ರವೇಶಿಸಿ ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಘೋಷಿಸಿ, ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಬೇಕು’ ಎಂದು ಒತ್ತಾಯಿಸಿದರು.

ಕುಂಬಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಮಡಿವಾಳರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿನಂದನ್, ಉಪ್ಪಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್ ಉಪ್ಪಾರ್, ದಲಿತ ಮಹಾಸಭಾದ ಅಧ್ಯಕ್ಷ ರಾಜೇಶ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ರಾಜಶೇಖರ್, ಎಫ್.ಎಂ.ಕಲೀಂ, ರಹೀಮ್ ಖಾನ್, ಮಹಮದ್ ಆಲಿ, ಲೋಕೇಶ್ ಕುಮಾರ್, ಹರೀಶ್ ಮೊಗಣ್ಣ, ಮಂಜುಳಾ, ಮಂಜುನಾಥ್, ಛಾಯಾ, ಅನಿಲ್, ನಿಂಗರಾಜು, ನಾರಾಯಣ್, ರವಿ, ನಜರ್‌ಬಾದ್, ದಿನೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.