
ಮೈಸೂರು: ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂದ ದಾಖಲೆಗೆ ಪಾತ್ರರಾದ ಕಾರಣ ಸಿ.ಎಂ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದೆಲ್ಲೆಡೆ ಸಂಭ್ರಮಾಚರಣೆ ನಡೆಸಿದರು.
ತೊಣಚಿಕೊಪ್ಪಲು, ಹೂಟಗಳ್ಳಿ, ಹಿನಕಲ್, ರಾಮಸ್ವಾಮಿ ವೃತ್ತ, ಸರಸ್ವತಿಪುರಂ ಸೇರಿದಂತೆ ವಿವಿಧೆಡೆ ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸಿದವು.
ಸಿ.ಎಂ ಅವರೇ ನಗರದಲ್ಲಿ ಇದ್ದುದರಿಂದ ಉತ್ಸವದ ಮಾದರಿಯಲ್ಲಿ ಉತ್ಸಾಹದಿಂದ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡ ಅಭಿಮಾನಿಗಳು, ಅವರಿಗೆ ಇಷ್ಟವಾದ ನಾಟಿಕೋಳಿ ಬಿರಿಯಾನಿ, ಪಲಾವ್, ಲಾಡು, ಪಾಯಸವನ್ನು ನಾಗರಿಕರಿಗೆ ಹಂಚಿ ಅಭಿಮಾನವನ್ನು ತೋರ್ಗೊಟ್ಟರು.
ನಾಟಿ ಪಲಾವ್ ಸ್ವಾದ:
ಟಿ.ಕೆ.ಬಡಾವಣೆಯ ಸಿ.ಎಂ ನಿವಾಸದಲ್ಲಿ ಅಹವಾಲು ಸಲ್ಲಿಸಲು ಬಂದವರಿಗೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡರಾದ ಯೋಗೇಶ್ ಉಪ್ಪಾರ್, ಎಚ್.ಎಸ್.ಪ್ರಕಾಶ್, ಕೋಟೆಹುಂಡಿ ಸಿ.ಮಹದೇವು, ಹರೀಶ್ ಮೊದಲಾದವರು ನಾಟಿಕೋಳಿ ಪಲಾವ್ ನೀಡಿದರು.
ಮುಖಂಡ ಜೆ.ಗೋಪಿ ಮೈಸೂರು ಪಾಕ್, ಬರ್ಫಿ ವಿತರಿಸಿದರೆ, ಮೋಹನ್‌ಕುಮಾರ್ ಅವರು ಪೋಸ್ಟರ್ ಹಿಡಿದು ಸಿಹಿ ಹಂಚಿದರು. ಅವರ ಪೋಸ್ಟರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಾಕ್ಷರ ಹಾಕಿದರು.
ಗಣ್ಯರಿಂದ ಅಭಿನಂದನೆ:
ನಿವಾಸದಲ್ಲಿ ಸಿ.ಎಂ ಅವರನ್ನು ಭೇಟಿ ಮಾಡಿದ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್ ಗೌಡ, ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ವಿವಿಧ ನಿಗಮಗಳ ಅಧ್ಯಕ್ಷರಾದ ಎಂ.ರಾಮಪ್ಪ, ಎಚ್.ಡಿ.ಗಣೇಶ್, ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಟಿ.ಬಿ.ಚಿಕ್ಕಣ್ಣ, ಅನಂತು, ಕೆ.ಮರೀಗೌಡ ಶುಭ ಕೋರಿದರು.
ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಡಿಸಿಪಿ ಕೆ.ಎಸ್.ಸುಂದರರಾಜ್ ಪಾಲ್ಗೊಂಡಿದ್ದರು.