ನಂಜನಗೂಡು (ಮೈಸೂರು ಜಿಲ್ಲೆ): ‘ತಳ ಸಮುದಾಯವಾದ ಉಪ್ಪಾರರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಸಮುದಾಯ ಸಂಘಟಿತವಾಗಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು. ಮುಖ್ಯವಾಹಿನಿಗೆ ಬರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ಭಾನುವಾರ ನಡೆದ ‘ಭಗೀರಥ ಜಯಂತ್ಯುತ್ಸವ’ದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಶಿಕ್ಷಣ ಪಡೆದಾಗ ಸಾಮಾಜಿಕ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಮಕ್ಕಳು ಶಿಕ್ಷಣ ವಂಚಿತರಾಗದಂತೆ ಉಪ್ಪಾರರು ನೋಡಿಕೊಳ್ಳಬೇಕು’ ಎಂದರು.
‘ಸಮುದಾಯವು ಎಂದಿಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಉಪ್ಪಾರರಿಗೆ ಕಡ್ಡಾಯವಾಗಿ ಶಾಸಕ ಸ್ಥಾನ ಸಿಗಲೇಬೇಕೆಂದು ಪುಟ್ಟರಂಗಶೆಟ್ಟಿ ಅವರಿಗೆ ಚಾಮರಾಜನಗರದಲ್ಲಿ ಟಿಕೆಟ್ ನೀಡಲಾಗಿತ್ತು. ಅವರು 4 ಬಾರಿ ಗೆದ್ದು, ಶಾಸಕ, ಸಚಿವ ಹಾಗೂ ಇದೀಗ ಎಂಎಸ್‌ಐಎಲ್ ಅಧ್ಯಕ್ಷರೂ ಆಗಿದ್ದಾರೆ. ರಾಜಕೀಯವಾಗಿ ಅವರಂತೆ ನೀವೂ ಬೆಳೆಯಿರಿ’ ಎಂದು ಸಲಹೆ ನೀಡಿದರು.
‘ಜಾತಿ, ಚಾತುರ್ವರ್ಣ ವ್ಯವಸ್ಥೆಯ ಕಾರಣದಿಂದ ಸಮಾಜದಲ್ಲಿ ಅಸಮಾನತೆಯಿದೆ. ಅದು ಹೋಗಲು ಎಲ್ಲ ಜಾತಿ, ಧರ್ಮದವರಿಗೆ ಸಮಾನ ಅವಕಾಶ ಸಿಗಬೇಕು. ಸಮುದಾಯಗಳ ಸಂಘಟನೆಗಾಗಿಯೇ ಆಯಾ ಸಮಾಜಕ್ಕೆ ಸೇರಿದ ದಾರ್ಶನಿಕರು, ಸಮಾಜ ಸುಧಾರಕರ ಜಯಂತಿ ಆಚರಿಸಲು ದಶಕದ ಹಿಂದೆ ಸರ್ಕಾರವೇ ಆದೇಶ ನೀಡಿತ್ತು’ ಎಂದು ಸ್ಮರಿಸಿದರು.
ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಅವಕಾಶ ನೀಡುವ ಮನವಿಗೆ ಉಸ್ತುವಾರಿ ಸಚಿವನಾಗಿ ಕ್ರಮವಹಿಸುವೆಕೆ.ವೆಂಕಟೇಶ್, ಪಶುಸಂಗೋಪನಾ ಸಚಿವ
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಉಪ್ಪಾರ ಸಮುದಾಯದ ಅಭಿವೃದ್ಧಿಗೆ ₹ 34.27 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಸಮುದಾಯ ಭವನಕ್ಕೆ ₹ 2.25 ಕೋಟಿ ಅನುದಾನ ನೀಡಲಾಗುತ್ತಿದೆ’ ಎಂದರು.
‘ಹಿಂದುಳಿದ ಸಮುದಾಯವರು ಪ್ರತಿ ಗ್ರಾಮದಲ್ಲೂ ಜಯಂತಿ ಆಚರಿಸಿ ಜನಾಂಗದಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಶೋಷಿತ ವರ್ಗಗಳು ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅಂಬೇಡ್ಕರ್ ಅವರ ಮೂರು ಅಂಶಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಶಕ್ತಿ ಯೋಜನೆಯಿಂದ ಬೆಂಗಳೂರಿನಲ್ಲಿ ಶೇ 23 ಹುಬ್ಬಳ್ಳಿಯಲ್ಲಿ ಶೇ 21ರಷ್ಟು ಉದ್ಯೋಗ ಹೆಚ್ಚಾಗಿದೆ. ಬಡತನ ಅಸಮಾನತೆ ನಿವಾರಣೆಗಿರುವ ಗ್ಯಾರಂಟಿ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿಸಿದ್ದರಾಮಯ್ಯ, ಮುಖ್ಯಮಂತ್ರಿ
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ನಗರಸಭೆ ಅಧ್ಯಕ್ಷ ಎನ್.ಶ್ರೀಕಂಠ, ಉಪಾಧ್ಯಕ್ಷೆ ರಿಯಾನ ಬಾನು, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಮುಖಂಡರಾದ ಕಳಲೆ ಕೇಶವಮೂರ್ತಿ, ಲತಾ ಸಿದ್ದಶೆಟ್ಟಿ, ಸಿ.ಎಂ.ಶಂಕರ್, ಕರಳಪುರ ನಾಗರಾಜ್, ಕೆ.ಬಿ.ಸ್ವಾಮಿ, ಮೂಗಶೆಟ್ಟಿ, ಮುದ್ದು ಮಾದಶೆಟ್ಟಿ, ಸೋಮಣ್ಣ ಪಾಲ್ಗೊಂಡಿದ್ದರು.
‘ಎಣ್ಣೆ– ಮಜ್ಜನಕ್ಕೆ ಅವಕಾಶ ಕೊಡಿ’
‘ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಉಪ್ಪಾರ ಸಮುದಾಯದವರಿಗೆ ಎಣ್ಣೆ– ಮಜ್ಜನ ಸೇವೆಯ ಅವಕಾಶ ಮಾಡಿಕೊಡಬೇಕು. ಮಹದೇಶ್ವರನಿಗೆ ಭಕ್ತಿ– ಸೇವೆಯ ಭಾಗ್ಯವನ್ನು ಸಿ.ಎಂ ಕರುಣಿಸಿಕೊಡಬೇಕು’ ಎಂದು ಎಂಎಸ್‌ಐಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.
‘ಉಪ್ಪಾರ ಜಾತಿಯ ಕುಲಶಾಸ್ತ್ರೀಯ ಅಧ್ಯಯನವಾಗಿದ್ದು ಅದನ್ನು ಅನುಷ್ಠಾನಗೊಳಿಸಬೇಕು. ಸಮುದಾಯ ಭವನಗಳ ಪೂರ್ಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಸಮುದಾಯದವರು ಕಾಂಗ್ರೆಸ್ ಸಿದ್ದರಾಮಯ್ಯ ಅವರಿಗೆ ಎಂದಿಗೂ ನಿಷ್ಠೆಯಿಂದಿದೆ ದ್ರೋಹ ಬಗೆದಿಲ್ಲ’ ಎಂದರು.
ಪ್ರವಾಹ ತಡೆಗೆ ಅನುದಾನ ನೀಡಿ: ದರ್ಶನ್
‘ತಾಲ್ಲೂಕಿಗೆ ಪ್ರಸಕ್ತ ವರ್ಷ ₹ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಉಪ್ಪಾರ ಸಮುದಾಯ ಭವನದ ಅಂದಾಜು ವೆಚ್ಚ ₹ 6 ಕೋಟಿ ಆಗಿದ್ದು ಹಂತ ಹಂತವಾಗಿ ಬಿಡುಗಡೆ ಮಾಡಿಕೊಡಬೇಕು’ ಎಂದು ಶಾಸಕರಾದ ದರ್ಶನ್ ಧ್ರುವನಾರಾಯಣ್ ಮನವಿ ಮಾಡಿದರು.
‘ಕಳೆದ ಸಾಲಿನಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ₹ 25 ಕೋಟಿ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ₹ 20 ಕೋಟಿ ಬಳಸಲಾಗಿದೆ. ದೇವನೂರು ಏತ ನೀರಾವರಿ ಯೋಜನೆಗೆ ₹ 90 ಕೋಟಿ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ₹ 60 ಕೋಟಿ ನೀಡಲಾಗಿದೆ. ಕಬಿನಿ– ನುಗು ಹೊರಹರಿವು ಹೆಚ್ಚಾದಾಗ ನಂಜನಗೂಡಿನಲ್ಲಿ ಪ್ರವಾಹ ಆಗುತ್ತಿದ್ದು ನದಿ ತೀರದಲ್ಲಿ ಸುರಕ್ಷಿತ ವ್ಯವಸ್ಥೆಗೆ ₹ 70 ಕೋಟಿ ವೆಚ್ಚದ ವಿಸ್ಕೃತ ಯೋಜನಾ ವರದಿ ತಯಾರಿಸಲಾಗಿದೆ. ಅದಕ್ಕೆ ಅನುದಾನ ಕೊಡಿ’ ಎಂದು ಒತ್ತಾಯಿಸಿದರು.
ಅದ್ದೂರಿ ಮೆರವಣಿಗೆ
ನಂಜನಗೂಡಿನ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಭಗೀರಥ ಜಯಂತಿ ಮೆರವಣಿಗೆಗೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳು ಸ್ಥಬ್ದಚಿತ್ರಗಳು ಸತ್ತಿಗೆ ಹಾಗೂ ಸೂರಿಪಾನಿ ಹೊತ್ತ ಜನರು ಗಮನ ಸೆಳೆದರು. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರನ್ನು ಅಲಂಕೃತ ಸಾರೋಟಿನಲ್ಲಿ ಕರೆದೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.