
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ | ತವರಿನಲ್ಲಿ ಅಧಿಕಾರಿಗಳ ಚಳಿ ಬಿಡಿಸಿದ ಮುಖ್ಯಮಂತ್ರಿ | ಶಿಕ್ಷಣ ಸೂಚ್ಯಂಕದಲ್ಲಿ ಜಿಲ್ಲೆಯು ಕುಸಿದಿರುವುದಕ್ಕೆ ಅಸಮಾಧಾನ
ಮೈಸೂರು: ‘ಕೆಲಸಗಳನ್ನು ಮಾಡಿಕೊಡಲು ಜನರನ್ನು ಕಚೇರಿಗೆ ಅಲೆದಾಡಿಸುವುದನ್ನು ಸಹಿಸಲಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನೆ) ಸಭೆಯಲ್ಲಿ ಅವರು ಮಾತನಾಡಿದರು.
‘ಜನರನ್ನು ಕಚೇರಿಗಳಿಗೆ ಅಲೆದಾಡಿಸುವುದು ಅಕ್ಷಮ್ಯ. ನೀವೆಲ್ಲರೂ ಜಿಲ್ಲಾ ಕೇಂದ್ರದಲ್ಲೇ ಏಕಿರಬೇಕು, ತಾಲ್ಲೂಕುಗಳಲ್ಲಿ ಇದ್ದುಕೊಂಡು ಜನರ ಸಮಸ್ಯೆ ಕೇಳಬೇಕೆಂದು ಸೂಚಿಸಿದ್ದೆ. ಇದನ್ನು ಪಾಲಿಸದ ಅಧಿಕಾರಿಗಳ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರಿಗೆ ಸೂಚಿಸಿದರು.
‘ಅಧಿಕಾರಿ ಮತ್ತು ಸಿಬ್ಬಂದಿ ಜನ ಸೇವೆಯ ಪ್ರಮಾಣಮಾಡಿ ಹುದ್ದೆ ಸ್ವೀಕರಿಸಿದ್ದೀರಿ; ಅದನ್ನು ಪಾಲಿಸಬೇಕು. ನಾವು (ಜನಪ್ರತಿನಿಧಿಗಳು) ಐದು ವರ್ಷಕ್ಕೊಮ್ಮೆ ಬರುವವರು, ಅಧಿಕಾರಿಗಳು ಶಾಶ್ವತವಾಗಿ ಇರುವವರು ಎನ್ನುವ ಭಾವನೆ ಬಿಟ್ಟು ಕೆಲಸ ಮಾಡಬೇಕು’ ಎಂದರು.
‘ಮೈಸೂರು ಅಭಿವೃದ್ಧಿಯ ವೇಗ ಹೆಚ್ಚಾಗಬೇಕು. ನಿಗದಿತ ಅವಧಿಯ ಒಳಗೆ ಕೆಲಸಗಳು ಪೂರ್ಣಗೊಳ್ಳಬೇಕು ಎಂಬ ಸೂಚನೆಯನ್ನು ಹಿಂದಿನ ಕೆಡಿಪಿ ಸಭೆಯಲ್ಲಿ ನೀಡಿದ್ದೆ. ಆದರೂ ಸಮಾಧಾನ ಎನಿಸುವಷ್ಟರ ಮಟ್ಟಿಗೆ ವೇಗ ಪಡೆದುಕೊಂಡಿಲ್ಲ ಏಕೆ? ಎಂದು ಕೇಳಿದರು.
‘ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮೈಸೂರು ಜನತೆಯ ಸಮಸ್ಯೆಗಳನ್ನು ಆಲಿಸುವ ಮತ್ತು ಪರಿಹಾರ ಒದಗಿಸುವ ಕೆಲಸವೂ ಆಗಬೇಕು’ ಎಂದು ನಿರ್ದೇಶನ ನೀಡಿದರು.
ಭೇಟಿ ನೀಡಿ ಪರಿಶೀಲಿಸಿ:
‘ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ನಾನು ಕೊಟ್ಟಿದ್ದ ಸೂಚನೆ ಪಾಲನೆ ಆಗುತ್ತಿಲ್ಲ. ಇನ್‌ಸ್ಪೆಕ್ಟರ್‌ಗಳು, ಪಿಡಿಒಗಳು, ವಿಎಗಳ ಮೇಲೆ ಈ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಯು ತಹಶೀಲ್ದಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದರೆ, ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ. ಇಲ್ಲಿಯವರೆಗೂ ಯಾರ ವಿರುದ್ಧವೂ ದೂರು ಬಂದಿಲ್ಲ. ವರದಿ ಬಂದಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ಹಾಸ್ಟೆಲ್‌ಗಳಿಗೆ ಆಗಾಗ ಭೇಟಿ ನೀಡಿ, ಅಲ್ಲಿನ ಊಟದ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತಿರಬೇಕು’ ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಜಿ.ಟಿ. ದೇವೇಗೌಡ, ಕೆ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಟಿ.ಎಸ್. ಶ್ರೀವತ್ಸ, ಸಂಸದ ಸುನೀಲ್ ಬೋಸ್, ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಶಿವಕುಮಾರ್, ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಾತಿ ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಿಸಿದ್ದರಾಮಯ್ಯ ಮುಖ್ಯಮಂತ್ರಿ
ಅಲ್ಲಿಗೇಕೆ ಬರುತ್ತಿದ್ದರು?
‘ಮೈಸೂರಿನ ತುಂಬಾ ಮಂದಿ ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ಕಾಯುತ್ತಾ ಇರುತ್ತಾರೆ. ಇವರಲ್ಲಿ ವೈಯುಕ್ತಿಕ ಸಮಸ್ಯೆಗಾಗಿ ಬರುವವರು ಕಡಿಮೆ. ಕಂದಾಯ ಇಲಾಖೆಯ ಸಮಸ್ಯೆಗಳಿಗಾಗಿ ಬರುವವರೇ ಹೆಚ್ಚು. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ ಇಲ್ಲಿನ ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ ಅವುಗಳನ್ನು ಬಗೆಹರಿಸಿದ್ದರೆ ಜನರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುತ್ತಿದ್ದರೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾರ್ಯಕರ್ತರನ್ನೇ ಕರೆ ತರ್ತೀರಿ...
‘ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆಗಾಗಿ ನಮಗೆ ಹತ್ತಿರದ ಕಾರ್ಯಕರ್ತರನ್ನೇ ಹಿಡ್ಕೊಂಡು ಬರ್ತೀರಿ. ಇದು ಕೆಟ್ಟ ನಡವಳಿಕೆ. ಇದರಿಂದ ಕಾರ್ಯಕರ್ತರಿಗೂ ಕೆಟ್ಟ ಹೆಸರು ಬರುತ್ತದೆ. ಸರ್ಕಾರಕ್ಕೂ ಕೆಟ್ಟ ಹೆಸರು ತರಲು ಮುಂದಾದರೆ ಸಹಿಸಲಾಗದು’ ಎಂದು ಸಿದ್ದರಾಮಯ್ಯ ತಿಳಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
16 ಹಾಡಿಗಳಲ್ಲಿ ವಿದ್ಯುದ್ದೀಕರಣ: ಡಿಸಿ
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ‘ಈ ಹಿಂದೆ ನಡೆದ ಸಭೆಗಳಲ್ಲಿ ಮುಖ್ಯಮಂತ್ರಿಯವರ ಸೂಚನೆಯಂತೆ 16 ಹಾಡಿಗಳಲ್ಲಿ ವಿದ್ಯುದ್ದೀಕರಣ ಮಾಡಲಾಗಿದೆ. ಆಸ್ಪತ್ರೆ ಹಾಸ್ಟೆಲ್ ಶಾಲೆ ಅಂಗನವಾಡಿ ಕೇಂದ್ರಗಳಿಗೆ ಕಂದಾಯ ಇಲಾಖೆಯಿಂದ 109 ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)ದಿಂದ 68 ಕಡೆ ಸ್ಥಳ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು. ‘150 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 580 ಸಹಾಯಕಿಯರನ್ನು ಆಯ್ಕೆ ಮಾಡಲಾಗಿದೆ. ಖಾಲಿ ಇರುವ 50 ಕಾರ್ಯಕರ್ತೆಯರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಂದಾಯ ಇಲಾಖೆ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕೋರ್ಟ್‌ನಲ್ಲಿ 90 ದಿನ ಮೇಲ್ಪಟ್ಟ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಒಂದು ವರ್ಷ ಮೇಲ್ಪಟ್ಟ ಯಾವುದೇ ಪ್ರಕರಣ ಇಲ್ಲ’ ಎಂದು ತಿಳಿಸಿದರು.
ಫಲಿತಾಂಶ ಸುಧಾರಿಸಬೇಕು...
‘ಮೈಸೂರು ಸಂಸ್ಥಾನ ಶಿಕ್ಷಣಕ್ಕೆ ಮೊದಲಿನಿಂದಲೂ ಅತ್ಯಂತ ಪ್ರಾಮುಖ್ಯತೆ ನೀಡಿದ್ದ ಪ್ರದೇಶ. ಇಲ್ಲೇ ಶಿಕ್ಷಣ ಸೂಚ್ಯಂಕದಲ್ಲಿ ಕುಸಿದಿರುವುದು ಸರಿಯಲ್ಲ’ ಎಂದು ಕೋಪಗೊಂಡರು. ‘ಪರಿಸ್ಥಿತಿ ಸುಧಾರಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಬೇಕು. ನಾನು ಎಲ್ಲವನ್ನೂ ಗಮನಿಸುತ್ತಿರುತ್ತೇನೆ’ ಎಂದು ನೂತನ ಡಿಸಿಪಿಐ ಉದಯಕುಮಾರ್ ಅವರಿಗೆ ಸೂಚಿಸಿದರು.
‘ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಜಿಲ್ಲೆಯ ಫಲಿತಾಂಶ ಉತ್ತಮಗೊಳ್ಳಬೇಕು. ಇದಕ್ಕೆ ಏನು ಮಾಡಬೇಕು ಎನ್ನುವ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು’ ಎಂದರು.
ಹೊಂದಾಣಿಕೆ ಕೊರತೆಯಾದರೆ ಕ್ರಮ’
ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಎಚ್.ಡಿ.ಕೋಟೆಯಲ್ಲಿ ಎಸಿಎಫ್ ಮತ್ತು ಆರ್‌ಎಫ್‌ಒ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ’ ಎಂದು ದೂರಿದರು. ‘ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯ ಲೋಪದಿಂದ ಮಾನವ ಜೀವ ಹಾನಿಯಾದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.