ADVERTISEMENT

‘ದೈವಾನುಭವಕ್ಕೆ ಮನಸ್ಸಿನ ಏಕಾಗ್ರತೆ ಅವಶ್ಯ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 13:43 IST
Last Updated 26 ಜೂನ್ 2022, 13:43 IST
ಸುತ್ತೂರು ಶ್ರೀಕ್ಷೇತ್ರದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ನೀಡಿದರು
ಸುತ್ತೂರು ಶ್ರೀಕ್ಷೇತ್ರದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ನೀಡಿದರು   

ಮೈಸೂರು: ‘ದೈವಾನುಭವಕ್ಕೆ ಮನಸ್ಸಿನ ಏಕಾಗ್ರತೆ ಅವಶ್ಯ’ ಎಂದುವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಭಾನುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ಅಪ್ರತಿಮ, ಅಗೋಚರ, ಅಗಮ್ಯ ಮತ್ತು ಪ್ರಶಾಂತವಾಗಿದೆ. ಗಿಡ–ಮರಗಳು, ಬೆಟ್ಟ–ಗುಡ್ಡಗಳು, ಹೂ, ಬಳ್ಳಿ ಎಲ್ಲವೂ ಸುಂದರವಾದವು. ಅವುಗಳನ್ನು ನೋಡಿ ಆಸ್ವಾದಿಸಬೇಕು. ಶರಣರು, ಸಂತರು, ಋಷಿ ಮುನಿಗಳು ಸುಂದರವಾದ ಹೂವುಗಳಿದ್ದಂತೆ. ಅವರ ನುಡಿಗಳು-ವಿಚಾರಗಳು ಅದ್ಭುತವಾಗಿರುತ್ತವೆ. ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ಅಲ್ಲಮಪ್ರಭು ಅವರ ‘ನೆಲ ಹೊಲದಲಿ, ಎಲ್ಲಿ ನೋಡಿದಡೆಲ್ಲಿ ನೀನಿದ್ದೆಯಯ್ಯ ಗುಹೇಶ್ವರ, ನಿಮ್ಮನ್ನು ಅಗಲಕ್ಕೆ ಅರಿದು ಕಂಡೆ’ ಎಂಬ ವಚನದಂತೆ ಪರ್ವತಗಳಲ್ಲಿ, ಗುಹೆಗಳಲ್ಲಿ, ಊರುಗಳಲ್ಲಿ, ಬಯಲು ಪ್ರದೇಶದಲ್ಲಿ ಹೀಗೆ... ಪ್ರತಿಯೊಂದು ವಸ್ತುವಿನಲ್ಲೂ ದೈವಾನುಭವವಿದೆ. ಎಲ್ಲಿ ಪ್ರಕೃತಿ ಸೌಂದರ್ಯವಿದೆಯೋ ಅಲ್ಲಿ ಸುಖವಿದೆ. ಪ್ರಕೃತಿಯನ್ನು ದ್ವೇಷಿಸುವ ಒಂದು ಜೀವಿಯೂ ಜಗತ್ತಿನಲ್ಲಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಎಲ್ಲವೂ ಪ್ರಕೃತಿಯಿಂದ ಬಂದುದೇ ಆಗಿದೆ’ ಎಂದು ಹೇಳಿದರು.

‘ಪಕ್ಷಿಗಳು ಹಾಡಿದರೆ ನಮ್ಮ ಹೃದಯವೂ ತೆರೆದು ಹಾಡುತ್ತದೆ. ಸೂರ್ಯ ಬೆಳಗಿದರೆ ನಮ್ಮ ಬುದ್ಧಿವಂತಿಕೆಯೂ ಬೆಳಗುತ್ತದೆ. ಕಾರಣ ನಾವು ಪ್ರಕೃತಿಗೆ ಹತ್ತಿರವಾಗಿದ್ದೇವೆ. ನಿಸರ್ಗವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಶಾಂತ ವಾತಾವರಣ ಹಾಗೂ ಅಲ್ಲಿನ ಸೌಂದರ್ಯದಲ್ಲಿ ದೈವತ್ವ ಪಡೆಯಲು ಸಾಧ್ಯ. ಅಂತೆಯೇ ಹೃದಯ ಮತ್ತು ಮನಸ್ಸು ಶುದ್ಧವಾಗಿದ್ದಾಗ ದೈವಾನುಭವ ಪಡೆಯಲು ಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.