ADVERTISEMENT

ನಂಜನಗೂಡು | ಪಾದಚಾರಿ ಮಾರ್ಗ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ

ನಂಜನಗೂಡು ಪಟ್ಟಣದ ಬಜಾರ್ ರಸ್ತೆಯಲ್ಲಿ ಪ್ರವಾಸಿಗರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:13 IST
Last Updated 6 ಫೆಬ್ರುವರಿ 2026, 7:13 IST
ನಂಜನಗೂಡಿನ ಬಜಾರ್ ರಸ್ತೆಯಲ್ಲಿ ರಸ್ತೆ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ತಳ್ಳುಗಾಡಿ ವ್ಯಾಪಾರಿಗಳು
ನಂಜನಗೂಡಿನ ಬಜಾರ್ ರಸ್ತೆಯಲ್ಲಿ ರಸ್ತೆ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ತಳ್ಳುಗಾಡಿ ವ್ಯಾಪಾರಿಗಳು   

ನಂಜನಗೂಡು: ನಗರದ ನೆಹರೂ ವೃತ್ತದಿಂದ ಹಳೇ ಪೊಲೀಸ್ ಠಾಣೆವರೆಗಿನ ಬಜಾರ್ ರಸ್ತೆಯ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು, ತಳ್ಳುಗಾಡಿಯವರು ಅತಿಕ್ರಮಿಸಿಕೊಂಡಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ದೇವಾಲಯಕ್ಕೆ ತೆರಳಲು ಬಜಾರ್ ರಸ್ತೆ ಮುಖ್ಯವಾಗಿದ್ದು, ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ವಸ್ತುಗಳನ್ನು ಇರಿಸಿ ಅತಿಕ್ರಮಿಸಿಕೊಂಡಿದ್ದಾರೆ. ಇದರ ಜೊತೆಗೆ ತಳ್ಳುಗಾಡಿಯಲ್ಲಿ ಹಣ್ಣು ವ್ಯಾಪಾರಿಗಳು ರಸ್ತೆಗೆ ಅಡ್ಡಲಾಗಿ  ವ್ಯಾಪಾರ ನಡೆಸುತ್ತಿರುವುದರಿಂದ ರಸ್ತೆ ಕಿಷ್ಕಿಂದೆಯಾಗಿದ್ದು, ಭಕ್ತರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಶ್ನೆ ಮಾಡಿದ ಸಾರ್ವಜನಿಕರ ಮೇಲೆ ವ್ಯಾಪಾರಿಗಳು ಜಗಳ ತೆಗೆಯುವುದರಿಂದ ದಿನನಿತ್ಯ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ.

‘ಬಜಾರ್ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದ ಪಾದಚಾರಿ ಮಾರ್ಗವನ್ನು ನಗರಸಭೆ ಅಧಿಕಾರಿಗಳು ಎರಡು ತಿಂಗಳ ಹಿಂದೆ ತೆರವುಗೊಳಿಸಿದ್ದರು. ವಾರದ ನಂತರ ವ್ಯಾಪಾರಿಗಳು ಮೊದಲಿನಂತೆ ರಸ್ತೆ ಅತಿಕ್ರಮಿಸಿದ್ದು, ನಗರಸಭೆ ಮತ್ತು ವ್ಯಾಪಾರಿಗಳ ಮಧ್ಯೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ತಳ್ಳುಗಾಡಿಯ ವ್ಯಾಪಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಪ್ರತಿದಿನ ನಗರಕ್ಕೆ ಭೇಟಿ ಕೊಡುವ ಮಂದಿ ಬೇಸರ ವ್ಯಕ್ತಪಡಿಸುತ್ತಾರೆ, ನಗರಸಭೆ, ಸಂಚಾರ ವಿಭಾಗದ ಪೊಲೀಸರು ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ನಗರಸಭೆ ಮಾಜಿ ಸದಸ್ಯ ಗಂಗಾಧರ್ ತಿಳಿಸಿದರು.

ADVERTISEMENT

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 20 ದಿನಗಳ ಹಿಂದೆ ನಡೆದ ಸಭೆಯಲ್ಲಿ ಬಜಾರ್ ರಸ್ತೆಯ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಸಂಚಾರ ವ್ಯವಸ್ಥೆ ಸರಿಪಡಿಸುವ ಜವಾಬ್ದಾರಿ ಹೊತ್ತ ಸಂಚಾರ ಪೊಲೀಸರ ದಿವ್ಯನಿರ್ಲಕ್ಷ್ಯ ಬೇಸರ ತರಿಸಿದೆ. ದೂರದ ಊರುಗಳಿಂದ ಬರುವ ಭಕ್ತರು ರಸ್ತೆ ಅತಿಕ್ರಮಣದ ನಡುವೆಯೇ ನಡೆದಾಡುವುದರಿಂದ ಅಪಘಾತ ಸಂಭವಿಸುತ್ತಿವೆ. ನಗರಸಭೆ- ಸಂಚಾರ ಪೊಲೀಸರು ಸಮನ್ವಯತೆಯಿಂದ ಒಟ್ಟಾಗಿ ಪಾದಾಚಾರಿ ಮಾರ್ಗ ತೆರವುಗೊಳಿಸಿದರೆ ಅನುಕೂಲವಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುನೀಲ್ ಮನವಿ ಮಾಡಿದರು.

‘ಬಜಾರ್ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನೆಹರೂ ವೃತ್ತದಿಂದ ಹಳೇ ಪೊಲೀಸ್ ಠಾಣೆವರೆಗಿನ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಬೇಕು, ಈ ರಸ್ತೆಯಲ್ಲಿ ತಳ್ಳುಗಾಡಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಾಗಿ ನಿಷೇಧ ಹೇರಬೇಕು, ನಗರಸಭೆ ಆಯುಕ್ತರು ಕ್ರಮವಹಿಸಿದರೆ ಸುಗಮ ಸಂಚಾರ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಹಾವನ್ನು ಬಿಟ್ಟು ಹುತ್ತವ ಬಡಿದಂತೆ ಪ್ರಯೋಜನವಾಗುವುದಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಕಪಿಲೇಶ್ ‘ಪ್ರಜಾವಾಣಿ‘ಗೆ ತಿಳಿಸಿದರು.

ನಂಜನಗೂಡಿನ ಬಜಾರ್ ರಸ್ತೆಯಲ್ಲಿ ರಸ್ತೆ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ತಳ್ಳುಗಾಡಿ ವ್ಯಾಪಾರಿಗಳು

- ವಾರದೊಳಗೆ ತೆರವುಗೊಳಿಸದಿದ್ದರೆ ಕ್ರಮ

‘ಬಜಾರ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳ ಮೇಲೆ ಕೆ.ಪಿ.ಆಕ್ಟ್ 92 (ಡಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ನೋಟಿಸ್ ನೀಡಿದ್ದು ದಂಡ ವಿಧಿಸಲಾಗಿದೆ. ಅಲ್ಲದೇ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಸಂಚಾರ ಪೊಲೀಸ್ ಹಾಗೂ ನಗರಸಭೆ ಸಿಬ್ಬಂದಿ ತೆರವುಗೊಳಿಸುವರು. ಅಲ್ಲದೇ ಪಾದಚಾರಿ ಮಾರ್ಗದಲ್ಲಿ ಇರಿಸಿದ ವಸ್ತುಗಳನ್ನು ಜಪ್ತಿ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಬಸವರಾಜು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.