
ಮೈಸೂರು: ದಸ್ತಾವೇಜು ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿ ಮೈಸೂರು ನಗರ ಮತ್ತು ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟದ ಸದಸ್ಯರು ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
‘ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲೆ ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆ ತರಲಾಗುತ್ತಿದೆ. ಇದರಿಂದ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದ್ದು, ಪತ್ರಬರಹಗಾರರಾದ ನಾವು ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.
‘ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ, ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದೂ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ. ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಅಧಿಕಾರಿಗಳು ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್, ಉಪಾಧ್ಯಕ್ಷ ಎಂ.ಎಸ್. ಧನಂಜಯ್, ಕಾರ್ಯದರ್ಶಿ ಕೆ.ಆರ್. ಉದಯ್ ಕುಮಾರ್, ಖಜಾಂಜಿ ಎಂ.ಎಸ್. ನರಸಿಂಹಮೂರ್ತಿ, ಸಂಚಾಲಕ ಎಂ. ಗಣೇಶ್, ನಿರ್ದೇಶಕರಾದ ಕೆ.ಆರ್. ಸತ್ಯನಾರಾಯಣ್, ಎಂ.ಎನ್. ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಫಣಿರಾಜ್ ಎಸ್., ಚಂದ್ರಶೇಖರ್ ಎಸ್., ಎನ್.ದಿನೇಶ್ ಕುಮಾರ್, ಎಸ್.ಎಸ್. ವೇಣು, ಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.