ಮೈಸೂರು: ದೃಷ್ಟಿಹೀನರ ಜೀವನದಲ್ಲಿ ಬದಲಾವಣೆ ತರಲು ಉದ್ದೇಶಿಸಿರುವ ಕಾರ್ಯಕ್ರಮವೇ ‘ಸ್ವಾಭಿಮಾನ’. ಈ ಯೋಜನೆಯು ದೃಷ್ಟಿಹೀನರಿಗೆ ಅಗತ್ಯವಾದ ಕೌಶಲ ಕಲಿಸಿ, ಉದ್ಯೋಗ ಸಾಧ್ಯತೆ ಉಂಟುಮಾಡುವ ಪ್ರಯತ್ನವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಒಡೆಯರ್ ಆರ್ಕಿಟೆಕ್ಚರ್ ಕೇಂದ್ರದಲ್ಲಿ ಭಾನುವಾರ ಇನ್ಫೋಸಿಸ್ ಮತ್ತು ಇಕ್ವಿಬೀಯಿಂಗ್ ಫೌಂಡೇಶನ್ ಸಹಯೋಗದಲ್ಲಿ ನಡೆದ ದೃಷ್ಟಿದೋಷ ಇರುವ ಯುವಕರಿಗೆ ಕೌಶಲಾಭಿವೃದ್ದಿ ಮತ್ತು ಜೀವನೋಪಾಯ ಕಾರ್ಯಕ್ರಮ ‘ಸ್ವಾಭಿಮಾನ’ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯಬೇಕೆಂಬ ಆಶಯವೇ ಈ ಯೋಜನೆ’ ಎಂದರು.
‘ಇಕ್ವಿಬೀಯಿಂಗ್ ಫೌಂಡೇಶನ್ ಸಿಇಒ ಅನಂತಲಕ್ಷ್ಮಿ, ಇನ್ಫೋಸಿಸ್ ಜೊತೆಗೆ ನಮ್ಮ ಸಹಕಾರದಿಂದ ಈ ಯೋಜನೆ ಸಾಧ್ಯವಾಯಿತು. ಸಮುದಾಯ ಮತ್ತು ಸಂಸ್ಥೆಗಳ ಒಗ್ಗಟ್ಟಿನ ಫಲ ಇದಾಗಿದೆ’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಸಹಕಾರವೂ ಸಿಕ್ಕಿದೆ. ಇನ್ಫೊಸಿಸ್ ಮತ್ತು ಇಕ್ವಿಬೀಯಿಂಗ್
ಫೌಂಡೇಷನ್ ಈ ಯೋಜನೆಯ ಮೂಲಕ ದೃಷ್ಟಿಹೀನರಿಗೆ ಸಮಾನತೆ, ಗೌರವ ಹಾಗೂ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಲು ಬದ್ಧವಾಗಿವೆ ಎಂದರು.
ಎಕ್ಸೆಲ್ ಗ್ರೂಪ್ ಅಧ್ಯಕ್ಷ ಸುಧನ್ವ ಧನಂಜಯ, ಇನ್ಫೋಸಿಸ್ ಉಪಾಧ್ಯಕ್ಷೆ ವಾಣಿಶ್ರೀ ಸಿ, ಇನ್ಫೊಸಿಸ್ ಫೌಂಡೇಷನ್ ಕಾರ್ಯಕ್ರಮ ವ್ಯವಸ್ಥಾಪಕ ಮಹೇಶ್ ಕುಮಾರ್ ಬಸವರಾಜಪ್ಪ, ಇನ್ಫೊಸಿಸ್ ಮೈಸೂರು ಮುಖ್ಯಸ್ಥ ವಿನಾಯಕ್ ಹೆಗ್ಡೆ, ಭಾರತೀಯ ವಿಜ್ಞಾನ ಸಂಸ್ಥೆ ಹಣಕಾಸು ನಿಯಂತ್ರಕರಾದ ಇಂದುಮತಿ ಶ್ರೀನಿವಾಸನ್, ಕಲಿಸು ಫೌಂಡೇಷನ್ ಸಂಸ್ಥಾಪಕ ಎಂ.ನಿಖಿಲೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.