
ಮೈಸೂರು: ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವದೊಂದಿಗೆ ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಶುಕ್ರವಾರ ನಡೆಯಿತು.
ಮಕ್ಕಳಾದ ರವಿಶಂಕರ್, ಉದಯ್ ಶಂಕರ್ ಅವರೊಂದಿಗೆ ಲೇಖಕಿ ಸಹನಾ ವಿಜಯ್ ಕುಮಾರ್ ಅವರು ನೂರಾರು ಜನರ ಅಶ್ರುತರ್ಪಣದ ಮಧ್ಯೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದರೊಂದಿಗೆ ಕನ್ನಡ ಸಾರಸ್ವತ ಲೋಕದ ದಿಗ್ಗಜನ ‘ಪರ್ವ’ ಅಂತ್ಯಗೊಂಡಿತು.
ಪಾರ್ಥೀವ ಶರೀರವನ್ನು ಗುರುವಾರ ಕಲಾಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಜೆಎಸ್‌ಎಸ್ ಆಸ್ಪತ್ರೆಯಿಂದ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ಸ್ಮಶಾನದಲ್ಲಿ ಪೊಲೀಸ್ ಅಧಿಕಾರಿ ಶಿವಾನಂದ ನೇತೃತ್ವದ ತಂಡವು 3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿತು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್ ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಅಂತಿಮ ನಮನ ಸಲ್ಲಿಸಿದರು. ಪ್ರಲ್ಹಾದ ಜೋಶಿ ಹಾಗೂ ಮಹದೇವಪ್ಪ ಅವರು ಭೈರಪ್ಪ ಅವರ ಪುತ್ರರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಅರಮನೆ ಪುರೋಹಿತರಾದ ಚಂದ್ರಶೇಖರ ಶಾಸ್ತ್ರಿ ನೇತೃತ್ವದ ತಂಡವು ಧಾರ್ಮಿಕ ಕಾರ್ಯ ನಡೆಸಿತು. ಅಸ್ಮಾರ್ಥ ಹೊಯ್ಸಳ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪುತ್ರರಿಬ್ಬರು ಅಂತಿಮ ವಿಧಾನ ನಡೆಸಿದರು. ಭೈರಪ್ಪ ಹುಟ್ಟೂರು, ಹಾಸನ ಜಿಲ್ಲೆ ಸಂತೇಶಿವರ ಗ್ರಾಮದ ನೂರಾರು ಮಂದಿ ಪಾಲ್ಗೊಂಡಿದ್ದರು. ‘ಅಮರ್ ರಹೇ, ಅಮರ್ ರಹೇ ಭೈರಪ್ಪಾಜಿ ಅಮರ್ ರಹೇ’ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.