ADVERTISEMENT

ನಿಷ್ಕಲ್ಮಶ ವ್ಯಕ್ತಿತ್ವದ ಭೈರಪ್ಪ.. ಪ್ರಧಾನ ಗುರುದತ್ತರಿಂದ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:28 IST
Last Updated 25 ಸೆಪ್ಟೆಂಬರ್ 2025, 2:28 IST
<div class="paragraphs"><p>ಎಸ್‌.ಎಲ್‌ ಭೈರಪ್ಪ</p></div>

ಎಸ್‌.ಎಲ್‌ ಭೈರಪ್ಪ

   

ಮೈಸೂರು: ಸುಮಾರು 50 ವರ್ಷಗಳಿಂದ ನಾನು ಮತ್ತು ಎಸ್‌.ಎಲ್‌. ಭೈರಪ್ಪನವರು ಸ್ನೇಹಿತರಾಗಿದ್ದೆವು. ಅವರ ‘ದಾಟು’ ಕಾದಂಬರಿಯನ್ನು ನಾನೇ ಇಂಗ್ಲಿಷ್‌ಗೆ ಅನುವಾದಿಸಿದ್ದೆ. ಅವರ ಇತ್ತೀಚಿನ ‘ಉತ್ತರ ಕಾಂಡ’ ಕಾದಂಬರಿ ಸೇರಿ ಏಳೆಂಟು ಕಾದಂಬರಿಗಳನ್ನು ಹಿಂದಿಗೂ ಅನುವಾದಿಸಿದ್ದೇನೆ.   

ಅವರು ಮೈಸೂರಿನಲ್ಲಿದ್ದಷ್ಟೂ ವರ್ಷ ಪ್ರತಿ ನಿತ್ಯವೂ ನಾವು ಭೇಟಿಯಾಗುತ್ತಿದ್ದೆವು. ಒಂದೂವರೆ–ಎರಡು ಗಂಟೆ ವಾಯುವಿಹಾರ ಮಾಡುತ್ತಿದ್ದೆವು. ಸಾಹಿತ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ಆಗುವ ಬದಲಾವಣೆಗಳು ಸೇರಿದಂತೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಪೂರ್ವಗ್ರಹವಿಲ್ಲದೆ ಮಾತನಾಡುತ್ತಿದ್ದರು. 

ADVERTISEMENT

ಅವರ ಆರೋಗ್ಯ ಕೆಟ್ಟ ಬಳಿಕ, ಬೆಂಗಳೂರಿಗೆ ಸ್ಥಳಾಂತರಗೊಳ್ಳುವವರೆಗೂ, ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಅವರ ಮನೆಗೆ ಹೋಗಿ ವಾಕ್‌ ಮಾಡಿಸಿ ಮತ್ತೆ ಮನೆಗೆ ಕರೆತಂದು ವಾಪಸಾಗುತ್ತಿದ್ದೆ. ಅವರ ಕೃತಿಗಳ ಹಸ್ತಪ್ರತಿಗಳನ್ನು ಕೊಟ್ಟು ಓದಿಸುತ್ತಿದ್ದರು. ಕೂಲಂಕಷವಾಗಿ ಓದಿ ನಾನು ತಿದ್ದುಪಡಿಗಳನ್ನು ಹೇಳುತ್ತಿದ್ದೆ. ನಂತರ ಒಟ್ಟಿಗೇ ಚರ್ಚಿಸುತ್ತಿದ್ದೆವು. ತಮ್ಮ ಸಾಹಿತ್ಯ ಕೃತಿಗಳ ಕುರಿತು ಅವರು ನನ್ನೊಂದಿಗೆ ತುಂಬಾ ಆಳವಾಗಿ ಚರ್ಚೆ ಮಾಡುತ್ತಿದ್ದರು. ದೇಶದ ಹಲವು ವಿಶ್ವವಿದ್ಯಾಲಯಗಳು, ಸಂಸ್ಥೆಗಳಲ್ಲಿ ಉಪನ್ಯಾಸ ನೀಡಲು ಒಟ್ಟಿಗೇ ಹೋಗುತ್ತಿದ್ದೆವು.

ರಾಮಾಯಣದ ಬಗ್ಗೆ ಕಾದಂಬರಿ ಬರೆದಿರುವುದರಿಂದ, ಅವರಿಗೆ ಅಯೋಧ್ಯೆಗೆ ಹೋಗಬೇಕೆಂಬ ಆಸೆ ಇತ್ತು. ಲಖನೌದ ಆರ್‌ಬಿಐ ಪ್ರಾದೇಶಿಕ ಸಂಸ್ಥೆಯವರು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ, ನನ್ನೊಂದಿಗೆ ಭೈರಪ್ಪ ಅವರನ್ನು ಕರೆತರಲು ಸಾಧ್ಯವೇ ಎಂದು ಕೇಳಿದ್ದರು. ಅವರೂ ಬರುವುದಾಗಿ ಒಪ್ಪಿದ್ದರಿಂದ, ಮೈಸೂರಿನಿಂದಲೇ ಅವರನ್ನು ವಿಮಾನದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು.

ಅವರ ಕೃತಿಗಳು ಭಾರತೀಯ ಭಾಷೆಗಳಿಗಷ್ಟೇ ಅಲ್ಲದೆ, ರಷ್ಯನ್‌ ಮತ್ತು ಚೀನಿ ಭಾಷೆಗಳಿಗೆ, ಲಿಪಿ ಇಲ್ಲದಂಥ ಸಂಕೇತಿ ಭಾಷೆಗೂ ಅನುವಾದಗೊಂಡಿರುವುದು ಅವರ ಸಾಹಿತ್ಯದ ಮಹತ್ವವನ್ನು ಸಾರುತ್ತದೆ. ಕನ್ನಡ ಸಾಹಿತ್ಯದಲ್ಲಷ್ಟೇ ಅಲ್ಲ, ಭಾರತೀಯ ಸಾಹಿತ್ಯದಲ್ಲಷ್ಟೇ ಅಲ್ಲ, ಇಡೀ ಜಾಗತಿಕ ಸಾಹಿತ್ಯದಲ್ಲೇ ಅವರ ಮಟ್ಟಕ್ಕೆ ಬರಬಲ್ಲವರು ವಿರಳ.

ಆಕಾಶವಾಣಿಯಲ್ಲಿದ್ದ ಎಂ.ಎಸ್‌.ಕೆ.ಪ್ರಭು, ಪ್ರೊ.ಹಾ.ಮಾ.ನಾಯಕ. ಪಿ.ಆರ್‌.ಅನಂತರಾವ್‌, ಮಹದೇವ್‌ ಹಾಗೂ ನಾನು ಸೇರಿ ಅವರಿಗೆ ಕೆಲವರೊಂದಿಗಷ್ಟೇ ಆತ್ಮೀಯತೆ ಇತ್ತು. ಪ್ರೊ.ದೇ.ಜ.ಗೌ. ಬಿಟ್ಟರೆ ನನಗೆ ತುಂಬ ಆತ್ಮೀಯರಾಗಿದ್ದವರು ಭೈರಪ್ಪ ಒಬ್ಬರೇ.

ಬಹು ದೊಡ್ಡ ವಿದ್ವಾಂಸರಾಗಿದ್ದ ಭೈರಪ್ಪ, ತತ್ವಶಾಸ್ತ್ರದ ಜೊತೆಗೆ ಜಾಗತಿಕ ಸಾಹಿತ್ಯವನ್ನೆಲ್ಲ ಚೆನ್ನಾಗಿ ಓದಿಕೊಂಡಿದ್ದರು. ಅವರು 1970ರ ದಶಕದಲ್ಲಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಗೆ (ಆರ್‌ಐಇ) ಪ್ರೊಫೆಸರ್‌ ಆಗಿ ಬಂದ ಮೇಲೆ ನಮ್ಮ ನಡುವೆ ಹೆಚ್ಚು ಆತ್ಮೀಯತೆ ಬೆಳೆದಿತ್ತು. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾನು ತೌಲನಿಕ ಸಾಹಿತ್ಯ ವಿಷಯದ ಪ್ರೊಫೆಸರ್‌ ಆಗಿದ್ದುದೂ ಅದಕ್ಕೆ ಪ್ರಮುಖ ಕಾರಣವಾಗಿತ್ತು. ಅವರ ಮತ್ತು ನನ್ನ ಮನೆ ಕುವೆಂಪು ನಗರದಲ್ಲೇ ಇದ್ದುದು ಕೂಡ ನಿಕಟತೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಒಬ್ಬ ಶ್ರೇಷ್ಟ ಲೇಖಕನನ್ನು ಇನ್ನೊಂದು ಭಾಷೆಗೆ ಅನುವಾದಿಸುವುದೆಂದರೆ ಮೂಲ ಕೃತಿಯ ಭಾಷಿಕರನ್ನು ದಾಟಿ ಅನ್ಯ ಭಾಷಿಕರಿಗೂ ಪರಿಚಯಿಸುವುದು. ಆ ಕಾರಣಕ್ಕೆ ಭೈರಪ್ಪನವರ ಕೃತಿಗಳ ಅನುವಾದ ನನಗೆ ಹೆಚ್ಚಿನ ಸಂತೋಷ ಕೊಡುತ್ತಿತ್ತು. ಅವರ ಕಾದಂಬರಿಗಳನ್ನು ಹಿಂದಿಗೆ ಕೆಲವು ಲೇಖಕರು ಅನುವಾದಿಸಿದ್ದಾರೆ. ಆದರೆ ನನ್ನ ಹಿಂದಿಯೇ ಅವರಿಗೆ ಹೆಚ್ಚು ಇಷ್ಟವಾಗಿತ್ತು. ನನ್ನ ಅನುವಾದಗಳಲ್ಲಿ ನಾನೇ ಮಾಡಿದ ತಪ್ಪುಗಳನ್ನೂ ಅವರಿಗೆ ತೋರಿಸುತ್ತಿದ್ದೆ. ಅದೇ ಕಾರಣಕ್ಕೆ ನನ್ನ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದರು. ನನ್ನದು ‘ಶ್ರೇಷ್ಠ ಹಿಂದಿ’ ಎಂದೇ ಗುರುತಿಸಿದ್ದರು. 

ಭೈರಪ್ಪನವರಿಗೆ ‘ಸರಸ್ವತಿ ಸಮ್ಮಾನ್‌’ ಬಂದ ಸಂದರ್ಭದಲ್ಲಿ, ಅವರು ನನ್ನನ್ನು ತಮ್ಮ ಕೃತಿಗಳ ಹಿಂದಿ ಅನುವಾದಕ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರಿಗೆ ಪರಿಚಯಿಸಿದ್ದರು. ಆಗ ಅವರು, ಅನುವಾದ ಬಾರದೇ ಇದ್ದಿದ್ದರೆ ನೀವು ಇಷ್ಟು ಶ್ರೇಷ್ಠ ಕೃತಿ ಬರೆದಿದ್ದೀರೆಂದು ನಮಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಈ ಪ್ರಶಸ್ತಿ ನಿಮಗಿಂತಲೂ, ಅನುವಾದಕರಿಗೇ ಬರಬೇಕಿತ್ತು ಎಂದಾಗ ಅಸೂಯೆ ಪಡದೆ ನಿಷ್ಕಲ್ಮಶವಾಗಿ ನಕ್ಕಿದ್ದರು. ಇದು ನಮ್ಮಿಬ್ಬರ ನಡುವೆ ಇದ್ದ ಆತ್ಮೀಯತೆ. 

(ನಿರೂಪಣೆ: ಕೆ.ನರಸಿಂಹಮೂರ್ತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.