ADVERTISEMENT

ಮೈಸೂರು: ಜಿಲ್ಲಾಡಳಿತದಿಂದಲೂ ಸಾಮಾಜಿಕ ಅಂತರ

ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿಯ ಫೇಸ್‌ಬುಕ್‌ ಲೈವ್‌

ಡಿ.ಬಿ, ನಾಗರಾಜ
Published 27 ಮಾರ್ಚ್ 2020, 10:54 IST
Last Updated 27 ಮಾರ್ಚ್ 2020, 10:54 IST
   

ಮೈಸೂರು: ಕೊರೊನಾ ವೈರಸ್ ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಪರಿಣಾಮಕಾರಿಯಾದ ಕ್ರಮಗಳಲ್ಲಿ ಒಂದಾದ ‘ಸಾಮಾಜಿಕ ಅಂತರ’ದ ಪಾಲನೆಗೆ ಜಿಲ್ಲಾಡಳಿತ ಮುಂದಡಿ ಇಟ್ಟಿದೆ.

ಆರಂಭದ ದಿನಗಳಲ್ಲಿ, ನಿತ್ಯವೂ ಜಿಲ್ಲೆಯಲ್ಲಿನ ಕೋವಿಡ್‌–19, ಕೊರೊನಾ ವೈರಸ್‌ ಸೋಂಕಿತರು, ರೋಗಿಗಳ ಕುರಿತಂತೆ ಅಧಿಕೃತ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಜಿಲ್ಲಾಡಳಿತ, ಇದೀಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಕ್ಕಾಗಿ, ಸಾಮಾಜಿಕ ಜಾಲತಾಣದ ಮೊರೆ ಹೋಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಕೋವಿಡ್–19 ಎರಡನೇ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ, ಪತ್ರಿಕಾಗೋಷ್ಠಿ ನಡೆಸುವುದನ್ನೇ ಕೈ ಬಿಟ್ಟಿದೆ. ವಾರ್ತಾ ಇಲಾಖೆಯ ಮೈಸೂರು ಕಚೇರಿಯ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ನೇರ ಪ್ರಸಾರದ ಮೂಲಕ ಸಕಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.

ADVERTISEMENT

ಫೇಸ್‌ಬುಕ್‌ ಪೇಜ್‌ನ ನೇರ ಪ್ರಸಾರದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಕಮಿಷನರ್ ನಿತ್ಯದ ಬೆಳವಣಿಗೆಯನ್ನು ನಿಗದಿತ ಸಮಯದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜನರ ಆತಂಕ ದೂರ ಮಾಡುವ ಜತೆಯಲ್ಲೇ, ನಿಯಮ ಉಲ್ಲಂಘನೆಯ ಪರಿಣಾಮದ ಖಡಕ್ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

ಫೇಸ್‌ಬುಕ್‌ ಲೈವ್‌ವಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನೀಡಿದ ಹಲವು ಖಡಕ್ ಸೂಚನೆಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ವಿವಿಧೆಡೆ ವೈರಲ್ ಸಹ ಆಗಿವೆ. ಬಹುತೇಕರ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲೂ ಇವು ಕಂಡು ಬಂದಿವೆ.

ಜಿಲ್ಲಾಡಳಿತದ ಈ ಕ್ರಮಕ್ಕೆ ವಾರ್ತಾ ಇಲಾಖೆಯ ಫೇಸ್‌ಬುಕ್‌ ಪೇಜ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ‘ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ಳುವ ಪ್ರಮುಖರೇ ಫೇಸ್‌ಬುಕ್‌ ಪೇಜ್‌ ಲೈವ್‌ನಲ್ಲಿ ಅಕ್ಕಪಕ್ಕವೇ ಕುಳಿತು ಮಾತನಾಡೋದು ಎಷ್ಟು ಸರಿ?’ ಎಂದು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.