ಮೈಸೂರು: ‘ಸಮೃದ್ಧಿ, ಶಾಂತಿ, ಸೌಹಾರ್ದತೆ, ಸಮಾನತೆಯ ಸಮಾಜ ಕಟ್ಟುವ ಆಯುಧವೇ (ಜಾನಪದ) ಇದೀಗ ಮೊಂಡಾಗುತ್ತಿದೆ’ ಎಂದು ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಭಾನುವಾರ ಇಲ್ಲಿ ತಿಳಿಸಿದರು.
ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ–2021ರಲ್ಲಿ, ಜನಪದ ಗಾಯನ ಮತ್ತು ಜನಪದ ನೃತ್ಯಗಳು ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
‘ಜನರ ಜಾನಪದವನ್ನು ಜನಪ್ರಿಯಗೊಳಿಸಲು ಮುಂದಾಗಿ ತಾಯಿಬೇರಿಗೆ ಹೊಡೆತ ಕೊಡುವ ಕೆಲಸ ಎಲ್ಲೆಡೆಯಿಂದಲೂ ನಡೆದಿದೆ’ ಎಂದು ಜನಾರ್ಧನ್ ಬೇಸರ ವ್ಯಕ್ತಪಡಿಸಿದರು.
‘ಕಲೆಯ ಹೆಸರಿನಲ್ಲಿ ಮೈಮರೆಯುತ್ತಿರೋದು–ಮೆರೆಯುತ್ತಿರೋದು ಹೆಚ್ಚಿದೆ. ಕಲೆ ಸಮಾಜದ ಒಳಿತಿಗೆ, ಮನುಷ್ಯನ ಬೆಳವಣಿಗೆಗೆ ಸದಾ ಪೂರಕವಾಗಿದ್ದಾಗ ಮಾತ್ರ ಸಾರ್ಥಕ’ ಎಂದು ಅವರು ಹೇಳಿದರು.
‘ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ. ಜನಪದ ಎಂದರೇ ಕುಟುಂಬ, ಸಮಾಜ, ಸಮೂಹ, ಪ್ರತಿಯೊಬ್ಬರ ಹೃದಯ, ಅಂತರಾಳ...’ ಎಂದು ವ್ಯಾಖ್ಯಾನಿಸಿದ ಜನ್ನಿ, ‘ಅಸಂಖ್ಯಾತ ಜನರ ಸೆಲೆ–ನೆಲೆ’ ಎಂದರು.
‘ಶ್ರಮಸಂಸ್ಕೃತಿಯಲ್ಲಿ ಹುಟ್ಟೋದೇ ಜನಪದ. ಶಾಂತಿ, ಸೌಹಾರ್ದತೆ, ಸಾಮರಸ್ಯ, ಮಾನವೀಯತೆ ಇಲ್ಲದ ಕಡೆಗೆ ಇಂದಿನ ಸಮಾಜ ಸಾಗುತ್ತಿದೆ. ಇದನ್ನು ಸರಿದಾರಿಗೆ ತರೋ ತಾಕತ್ತು ಜನಪದಕ್ಕಿದೆ. ಜನರ ಬಾಯಿಂದ ಬಾಯಿಗೆ ಹರಡುವ ಜನಪದವನ್ನು ಜತನದಿಂದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ’ ಎಂದು ಅವರು ಹೇಳಿದರು.
ಲಕ್ಷ್ಮಿರಾಮ್, ದೇವಾನಂದವರಪ್ರಸಾದ, ಮೈಸೂರು ಮಹಾಲಿಂಗು, ಪಿ.ಸೋಮಶೇಖರ್, ಎಸ್.ಲಾಸ್ಯ, ಐ.ಡಿ.ಲೋಕೇಶ್, ವಿಶ್ವನಾಥ್ ಎಲ್.ಚಂಗಚಹಳ್ಳಿ ಜನಪದ ಹಾಡುಗಳ ಹೊಳೆಯನ್ನೇ ಹರಿಸಿದರು.
ಕೋಲಾಟ, ಮಾರಿಕುಣಿತ, ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ಬಾಲೆಯರ ಕಂಸಾಳೆ ನೃತ್ಯ ಗಮನ ಸೆಳೆದವು.
ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರು, ಗೌತಮ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.