ADVERTISEMENT

ಮೈಸೂರು: ಕೆಸರೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬೆಂಕಿ

50 ಟನ್‌ ತ್ಯಾಜ್ಯ, ₹ 40 ಲಕ್ಷ ಮೌಲ್ಯದ ಯಂತ್ರೋಪಕರಣ ಆಹುತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:39 IST
Last Updated 5 ಆಗಸ್ಟ್ 2025, 2:39 IST
ಮೈಸೂರಿನ ಹಳೆ ಕೆಸರೆಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದು, ತ್ಯಾಜ್ಯ ಭಸ್ಮವಾಗಿರುವುದು
ಮೈಸೂರಿನ ಹಳೆ ಕೆಸರೆಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದು, ತ್ಯಾಜ್ಯ ಭಸ್ಮವಾಗಿರುವುದು   

ಮೈಸೂರು: ನಗರದ ಹಳೆ ಕೆಸರೆಯಲ್ಲಿನ ಘನ ತ್ಯಾಜ್ಯ ಸಂಸ್ಕರಣೆ ವಿಲೇವಾರಿ ಘಟಕಕ್ಕೆ ಸೋಮವಾರ ಬೆಂಕಿ ಬಿದ್ದು, 50 ಟನ್‌ ತ್ಯಾಜ್ಯ ಭಸ್ಮವಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ಪಾಲಿಕೆಯ ಈ ಘಟಕದಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯು ದಟ್ಟವಾಗಿ ವ್ಯಾಪಿಸಿತ್ತು. ನಾಗರಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರಿಂದ, ತಕ್ಷಣದಲ್ಲೇ ಬಂದ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದರು. 

ಭಾರಿ ಅನಾಹುತ ತಪ್ಪಿದ್ದು, ₹ 40 ಲಕ್ಷ ಮೌಲ್ಯದ ತ್ಯಾಜ್ಯ ವಿಂಗಡಿಸುವ ಯಂತ್ರೋಪಕರಣ ಬೆಂಕಿಗೆ ಆಹುತಿಯಾಗಿದೆ. 

ADVERTISEMENT

ದಟ್ಟ ಹೊಗೆ:

ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ವಸ್ತುಗಳು ಸುಟ್ಟಿದ್ದರಿಂದ ಸುತ್ತಮುತ್ತ ಹೊಗೆ ದಟ್ಟವಾಗಿ ಆವರಿಸಿತ್ತು. ಪ್ಲಾಸ್ಟಿಕ್ ಸುಟ್ಟ ವಾಸನೆ ಹಬ್ಬಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.  

ಸ್ಥಳಾಂತರಕ್ಕೆ ಪ್ರತಿಭಟನೆ:

‘ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿ ‘ಜನಸ್ಪಂದನಾ ಹಿತರಕ್ಷಣ ವೇದಿಕೆ’ ನೇತೃತ್ವದಲ್ಲಿ ಸ್ಥಳೀಯರು, ಪಾಲಿಕೆ ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ವೇದಿಕೆಯ ಪ್ರಶಾಂತ್ ಮಾತನಾಡಿ, ‘ಘಟಕದಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಅಂತರ್ಜಲವೂ ಕೆಟ್ಟಿದೆ. ಕೊಳಚೆ ನೀರನ್ನು ವರುಣ ಕಾಲುವೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಉಪ ಲೋಕಾಯುಕ್ತ ಫಣೀಂದ್ರ ಅವರ ಗಮನಕ್ಕೂ ತರಲಾಗಿತ್ತು. ಯಾವುದೇ ಪ್ರಯೋಜವಾಗಿಲ್ಲ’ ಎಂದು ದೂರಿದರು. 

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಅವರೊಂದಿಗೆ ಪ್ರತಿಭಟನಕಾರರು ಮಾತಿನ ಚಕಮಕಿ ನಡೆಸಿದರು.

ಪೊಲೀಸರು ಬಂದು ಪ್ರತಿಭಟನಕಾರರ ಮನವೊಲಿಸಿದರು. ಮುಖಂಡರಾದ ಮಾದೇಶ, ರೇವಣ್ಣ, ಶಿವಮಲ್ಲು, ವೆಂಕಟರಾಜು, ಅಲಸಿಂಗನ್‌, ಜಯಶಂಕರ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.