ಮೈಸೂರು: ‘ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭಾನುವಾರ ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ₹ 2 ಕೋಟಿ, ರಾಜ್ಯ ಸರ್ಕಾರ ₹ 1 ಕೋಟಿ, ಆರ್‌ಸಿಬಿ ತಂಡದಿಂದ ₹ 2 ಕೋಟಿ ಸೇರಿದಂತೆ ತಲಾ ಒಬ್ಬರಿಗೆ ₹ 5 ಕೋಟಿ ಪರಿಹಾರ ನೀಡಬೇಕು’ ಎಂದು ವಾಟಾಳ್ ಒತ್ತಾಯಿಸಿದರು.
‘ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ ಮತ್ತು ಸಮಾರಂಭ ನಡೆಸಲು ತೀರ್ಮಾನಿಸಿದವರು ಯಾರು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ 11 ಮಂದಿ ಅಮಾಯಕರ ಸಾವಿಗೆ ಯಾರು ಕಾರಣ? ದುರ್ಘಟನೆಯಿಂದ ಸಾಕಷ್ಟು ಮಂದಿ ನೊಂದಿದ್ದಾರೆ. ಐಪಿಎಲ್ ಬೆಟ್ಟಿಂಗ್ ದಂಧೆಯಿಂದಲ್ಲೂ ಜನ ಬೇಸತ್ತಿದ್ದಾರೆ’ ಎಂದು ಕಿಡಿಕಾರಿದರು.
‘ರಾಜ್ಯದ ಇತಿಹಾಸದಲ್ಲಿಯೇ ಇಂತಹ ದುರ್ಘಟನೆ ಇದೆ ಮೊದಲು. ವಿಜಯೋತ್ಸವ ವೇಳೆ ಪ್ರಾಣ ಕಳೆದುಕೊಂಡವರ ಕುಟುಂಬದವರು ಕಣ್ಣೀರು ಹಾಕುತ್ತಿರುವ ದೃಶ್ಯ ಕರುಳು ಹಿಂಡುತ್ತದೆ’ ಎಂದರು.
‘ವಿಧಾನಸೌಧದ ಮೆಟ್ಟಿಲಿನ ಮೇಲೆ ಕಾರ್ಯಕ್ರಮ ಮಾಡಿದ್ದೇ ಅಕ್ಷಮ್ಯ. ಸಮಾರಂಭ ಮಾಡುವಾಗ ಸಿಎಂ, ಡಿಸಿಎಂ, ಗೃಹಮಂತ್ರಿ ಹಾಗೂ ಹಿರಿಯ ಅಧಿಕಾರಿಗಳು ಕುಳಿತು ಚರ್ಚಿಸಬೇಕು. ಸಾವಿನಲ್ಲೂ ಬಿಜೆಪಿ, ಜೆಡಿಎಸ್ ರಾಜಕೀಯ ಮಾಡಿವೆ. ಈ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಯಾರೂ ಸಾಚ ಅಲ್ಲ. ಎಲ್ಲ ಪಕ್ಷದಲ್ಲಿಯೂ ಪಾಪಿಗಳು ಇದ್ದಾರೆ’ ಎಂದು ಹರಿಹಾಯ್ದರು.
‘ಪೊಲೀಸರು ಸರ್ಕಾರದ ಗುಲಾಮರಲ್ಲ. ಕೂಡಲೇ ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹಾಗೂ ರಾಜಭವನದ ಬಳಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಕಾಲ್ತುಳಿತ ಪ್ರಕರಣದ ಜವಾಬ್ದಾರಿ ಸರ್ಕಾರವೇ ಹೊರಬೇಕು. ಪ್ರಕರಣದ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಐಪಿಎಲ್ ಎನ್ನುವುದು ಜೂಜಾಟ. ಇದನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಶಿವಶಂಕರ್, ಪಾರ್ಥ ಸಾರಥಿ, ತೇಜಸ್ ಲೋಕೇಶ್‌ಗೌಡ, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.