ADVERTISEMENT

900 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಕ್ರಮ: ಮುನಿಗೋಪಾಲರಾಜು

‘ಸೆಸ್ಕ್‌’ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:59 IST
Last Updated 27 ಜನವರಿ 2026, 7:59 IST
ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ಮೈಸೂರಿನಲ್ಲಿ ಸೋಮವಾರ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಪರಿಹಾರದ ಚೆಕ್ ವಿತರಿಸಿದರು
ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ಮೈಸೂರಿನಲ್ಲಿ ಸೋಮವಾರ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಪರಿಹಾರದ ಚೆಕ್ ವಿತರಿಸಿದರು   

ಮೈಸೂರು: ‘ಕುಸುಮ್-ಸಿ ಯೋಜನೆಯಡಿ ‘ಸೆಸ್ಕ್‌’ ವ್ಯಾಪ್ತಿಯಲ್ಲಿ 900 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಕ್ರಮ ವಹಿಸಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ತಿಳಿಸಿದರು.

ಇಲ್ಲಿನ ವಿಜಯನಗರದ ‘ಸೆಸ್ಕ್‌’ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘900 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯಾದರೆ ಮಾರ್ಚ್ ವೇಳೆಗೆ 600 ಮೆಗಾವಾಟ್‌ ಸೆಸ್ಕ್ ವ್ಯಾಪ್ತಿಗೆ ಸೇರಲಿದೆ. ಆಗ, ಬೇಸಿಗೆಯಲ್ಲಿ ಎದುರಾಗುವ ವಿದ್ಯುತ್‌ ಪೂರೈಕೆಗೆ ಒತ್ತಡ ನಿವಾರಿಸಲು ಸಹಕಾರಿ ಆಗಲಿದೆ. ಕುಸುಮ್-ಬಿ ಯೋಜನೆಯಲ್ಲಿ 6ಸಾವಿರ ರೈತರು ಲಾಭ ಪಡೆದಿದ್ದು, 60 ಮೆಗಾವಾಟ್‌ ಗ್ರಿಡ್‌ನಿಂದ ಅವರಿಗೆ ಲಭ್ಯವಾಗಲಿದೆ. ಹೀಗಾಗಿ, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

‘ಮುಡಾದಿಂದ 22 ನಿವೇಶನಗಳನ್ನು ಸೆಸ್ಕ್‌ಗೆ ಪಡೆಯಲಾಗಿದೆ. ಕಚೇರಿ ಹಾಗೂ ಸ್ಟೋರ್‌ಗಳನ್ನು ನಿರ್ಮಿಸಲಾಗುವುದು. ಸ್ಟೇಷನ್ ನಿರ್ಮಾಣಕ್ಕೆ 10 ನಿವೇಶನ ಪಡೆಯಲಾಗಿದೆ. ಹೊಸದಾಗಿ 11 ಕೆವಿ ಮಾರ್ಗಗಳು, 100-120 ಹೊಸ ಕೇಂದ್ರಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ. ಇದರಿಂದ ವಿದ್ಯುತ್‌ ಸೋರಿಕೆ, ಅಡಚಣೆ ಹಾಗೂ ನಷ್ಟ ಕಡಿಮೆ ಆಗಲಿದೆ‌’ ಎಂದು ತಿಳಿಸಿದರು.

ಕೊಡಗುಗಾಗಿ: ‘ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ 10-15 ವರ್ಷಗಳಿಂದ ಆಗದ ಕೆಲಸವನ್ನು ಕಡಿಮೆ ಅವಧಿಯಲ್ಲಿ ₹200 ಕೋಟಿ ವೆಚ್ಚದಲ್ಲಿ ನಡೆಸಲಾಗಿದೆ. ನಗರದಲ್ಲಿ ‌ವಿದ್ಯುತ್ ಯುಜಿ ಕೇಬಲ್ ಅಳವಡಿಕೆ, ಹಾಡಿಗಳಲ್ಲಿ ವಿದ್ಯುತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಕೇಂದ್ರದಿಂದ ಆರ್‌ಡಿಎಸ್‌ಎಸ್‌ ಅನುದಾನ ತರಲು ಯತ್ನಿಸಲಾಗಿದೆ. ಡಿಪಿಆರ್‌ ಸಲ್ಲಿಸಲಾಗಿದೆ. ಶೇ 60ರಷ್ಟು ಅನುದಾನ ನೇರವಾಗಿ ಕೇಂದ್ರದ ಮೂಲಕ ಸೆಸ್ಕ್ ವ್ಯಾಪ್ತಿಗೆ ಸಿಗಲಿದೆ. ₹ 150 ಕೋಟಿ‌ ಡಿಪಿಆರ್ ಮಾಡಿದ್ದು, ಇದರಲ್ಲಿ ಮೈಸೂರು ನಗರಕ್ಕೆ ಸ್ಕಾಡಾ ಆಟೊ ಚೇಂಜ್‌ ಓವರ್‌ ವ್ಯವಸ್ಥೆ ಅಳವಡಿಸಲು ಕ್ರಮ ವಹಿಸಲಾಗಿದೆ’ ಎಂದರು.

‘90 ವಿತರಣಾ ಹಾಗೂ ಪ್ರಸರಣ ಕೇಂದ್ರಗಳನ್ನು ಬಲಪಡಿಸುವ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

ಇತ್ತೀಚೆಗೆ ಹನೂರು ಉಪ ವಿಭಾಗ ವ್ಯಾಪ್ತಿಯ ಸಿಬ್ಬಂದಿ ಟಿ. ರಾಹುಲ್‌ ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಕಾರಣ, ಕುಟುಂಬದವರಿಗೆ ₹ 1 ಕೋಟಿ ಪರಿಹಾರದ ಚೆಕ್ ವಿತರಿಸಲಾಯಿತು.

ಸೆಸ್ಕ್‌ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್‌. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ಆ. ಮತ್ತು ಮಾ.ಸಂ) ಬಿ.ಆರ್.‌ ರೂಪಾ, ಸೆಸ್ಕ್‌ ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್‌, ಕೆನರಾ ಬ್ಯಾಂಕ್‌ ವಲಯ ವ್ಯವಸ್ಥಾಪಕ ಉಮೇಶ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.