ಮೈಸೂರು: ಇಲ್ಲಿ ಬುಧವಾರ ನಡೆದ ನಾಡಹಬ್ಬ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿದ ಸ್ತಬ್ಧಚಿತ್ರಗಳು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸುವ ಜೊತೆಗೆ, ನಾಡಿನ ಸಾಧನೆಯನ್ನು ಅನಾವರಣಗೊಳಿಸಿದವು.
ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ಐದು ಕಿ.ಮೀ. ‘ರಾಜಪಥ’ದಲ್ಲಿ ಕಲಾವಿದರ ಸೃಜನಶೀಲತೆಯು ಸ್ತಬ್ಧಚಿತ್ರಗಳಲ್ಲಿ ಹೊಳೆಯಿತು. ಗಾಂಧಿ ಜಯಂತಿಯ ದಿನವೇ ಜಂಬೂಸವಾರಿ ನಡೆದಿದ್ದರಿಂದ, ಗಾಂಧೀಜಿ ನಾಡಿಗೆ ಭೇಟಿ ಕೊಟ್ಟಿದ್ದ ಘಟನೆಗಳನ್ನು ಬಿಂಬಿಸುವ ‘ಹೆಜ್ಜೆಗುರುತು’ಗಳನ್ನು ಕಟ್ಟಿಕೊಡಲಾಯಿತು. ‘ವಿಜಯದಶಮಿ ಮೆರವಣಿಗೆ’ಯನ್ನು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಬಿಂಬಿಸುವ ವೇದಿಕೆಯನ್ನಾಗಿಯೂ ಬಳಸಿಕೊಳ್ಳಲಾಯಿತು.
ವೈವಿಧ್ಯಮಯ ಚಿತ್ರಗಳು: ಮಂಡ್ಯದ ಸ್ವಾತಂತ್ರ್ಯ ಹೋರಾಟದ ದೀಪ–ಶಿವಪುರದ ಧ್ವಜ ಸತ್ಯಾಗ್ರಹ, ಚರಕದಲ್ಲಿ ಗಾಂಧೀಜಿ ನೂಲುತ್ತಿರುವ ಚಿತ್ರಣ, ಧಾರವಾಡ ಜಿಲ್ಲೆ ಗರಗದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ, ಕಲಘಟಗಿ ಬಣ್ಣದ ತೊಟ್ಟಿಲು ಹಾಗೂ ನವಲಗುಂದ ಜಮಖಾನ, ಬಳ್ಳಾರಿ ಜಿಲ್ಲೆಯ ‘ಸೆಪ್ಟೆಂಬರ್‌ನಲ್ಲಿ ಸಂಡೂರು ನೋಡು’, ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವ, ಮೈಸೂರು ಜಿಲ್ಲೆ ಬದನವಾಳು ನೂಲುವ ಯಂತ್ರದ ಸ್ತಬ್ಧಚಿತ್ರಗಳು ಗಾಂಧೀಜಿ ನೆನಪನ್ನು ಹೊತ್ತು ತಂದವು. ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಅವರ ಸಂದೇಶವನ್ನೂ ಸಾರಿದವು.
‘ಶಕ್ತಿ’ ಯೋಜನೆಯ ಸ್ತಬ್ಧಚಿತ್ರವು ಮಹಿಳಾ ಸಬಲೀಕರಣವನ್ನು ಬಿಂಬಿಸಿತು. ಇದೇ ಮೊದಲಿಗೆ ಪಾಲ್ಗೊಂಡಿದ್ದ ಎಚ್ಎಎಲ್‌ನ ತೇಜಸ್ ಯುದ್ಧ ವಿಮಾನ, ಪ್ರಚಂಡ್ ಸಾಧನೆಯನ್ನು ಪರಿಚಯಿಸಿತು. ಪ್ರಥಮ ಬಾರಿಗೆ ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ‘ನಶೆ ಮುಕ್ತ ಕ್ಯಾಂಪಸ್’ ಅಭಿಯಾನದ ಸ್ತಬ್ಧಚಿತ್ರ ಮಾದಕವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿತು.
ಅಂಬೇಡ್ಕರ್ ನೆನಪು: ಬಿಇಎಂಎಲ್ ತಾನು ‘ರಾಷ್ಟ್ರದ ಹೆಮ್ಮೆ’ ಎಂದರೆ, ಭಾರತೀಯ ರೈಲ್ವೆಯು ‘ಪಂಬನ್ ರೈಲ್ವೆ ಸೇತುವೆ’ ಸೇರಿದಂತೆ ತನ್ನ ಸಾಧನೆಗಳನ್ನು ಪ್ರತಿಬಿಂಬಿಸಿತು. ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಪರಿಚಯಿಸಿದ ರಾಜ್ಯ ಪೊಲೀಸ್ ಇಲಾಖೆಯ ಸ್ತಬ್ಧಚಿತ್ರವು ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಿತು. ಸಮಾಜ ಕಲ್ಯಾಣ ಇಲಾಖೆಯ ‘ಸ್ವಾವಲಂಬನೆಯ ಬದುಕು’ ಸ್ತಬ್ಧಚಿತ್ರವು ಸಂವಿಧಾನ ಶಿಲ್ಪಿ ಅಂಬೇಡ್ಕರ್ ನೆನಪನ್ನು ಹೊತ್ತು ತಂದಿತು. ಆಹಾರ ಇಲಾಖೆಯು ‘ಹಸಿವು ಮುಕ್ತ ಕರ್ನಾಟಕ’ಕ್ಕಾಗಿ ಅನ್ನಭಾಗ್ಯ ಯೋಜನೆಯ ಮೂಲಕ ಶ್ರಮಿಸಲಾಗುತ್ತಿದೆ ಎಂದು ತಿಳಿಸಿತು. ನಗರಾಭಿವೃದ್ಧಿ ಇಲಾಖೆಯ ಇಂದಿರಾ ಕ್ಯಾಂಟೀನ್ ಸ್ತಬ್ಧಚಿತ್ರ ಸಹಸ್ರಾರು ವೀಕ್ಷಕರ ಗಮನಸೆಳೆಯಿತು.
ಪ್ಲಾಸ್ಟಿಕ್ ದುಷ್ಪರಿಣಾಮ:
ಮೈಸೂರು ಮಹಾನಗರ ಪಾಲಿಕೆ, ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ್ದ ಪೌರಕಾರ್ಮಿಕ ಮಹಿಳೆಯ ದೊಡ್ಡದಾದ ಪ್ರತಿಕೃತಿಯ ಸ್ತಬ್ಧಚಿತ್ರ, ಪ್ಲಾಸ್ಟಿಕ್ ದುಷ್ಪರಿಣಾಮವನ್ನು ತಿಳಿಸಿತು. ‘ಪ್ರಗತಿಯತ್ತ ಕರ್ನಾಟಕ ಸಾಗುತ್ತಿದೆ’ ಎಂದು ವಾರ್ತಾ ಇಲಾಖೆಯ ಸ್ಥಬ್ಧಚಿತ್ರ ಪ್ರತಿಪಾದಿಸಿತು.
ಜಿಲ್ಲೆಗಳ ವೈಶಿಷ್ಟ್ಯಗಳನ್ನು ಬಿಂಬಿಸುವ, ವಿವಿಧ ಇಲಾಖೆ, ನಿಗಮ–ಮಂಡಳಿಗಳ ಕಾರ್ಯಕ್ರಮಗಳನ್ನು ತಿಳಿಸುವ ಒಟ್ಟು 58 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ‘ರಾಜಪಥ’ದಲ್ಲಿ ನಾಡಿನ ಪ್ರಗತಿಯ ಪಥದ ಮೇಲೆ ಬೆಳಕು ಚೆಲ್ಲಿದವು. ಪಾಲ್ಗೊಂಡಿದ್ದವರು ತಮ್ಮ ಜಿಲ್ಲೆಯ ಸ್ತಬ್ದಚಿತ್ರವನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.