ADVERTISEMENT

ಹೊಟ್ಟೆ ಉಬ್ಬರ: ಏಕಾಏಕಿ 16 ಕುರಿ ಸಾವು

ಎರಡು ದಿನದ ಹಿಂದೆ 7 ರಾಸು ಕಳೆದುಕೊಂಡಿದ್ದ ರೈತನಿಗೆ ‌ಮತ್ತೊಂದು ಆಘಾತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:11 IST
Last Updated 18 ಫೆಬ್ರುವರಿ 2021, 8:11 IST
ಹುಣಸೂರು ತಾಲ್ಲೂಕಿನ ದೇವಗಳ್ಳಿಯಲ್ಲಿ ರೈತ ಅನಿಲ್‌ ಗೌಡ ಅವರಿಗೆ ಸೇರಿದ 16 ಕುರಿ ಬುಧವಾರ ಸಾವನ್ನಪ್ಪಿರುವುದು
ಹುಣಸೂರು ತಾಲ್ಲೂಕಿನ ದೇವಗಳ್ಳಿಯಲ್ಲಿ ರೈತ ಅನಿಲ್‌ ಗೌಡ ಅವರಿಗೆ ಸೇರಿದ 16 ಕುರಿ ಬುಧವಾರ ಸಾವನ್ನಪ್ಪಿರುವುದು   

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿ ಗ್ರಾಮದ ಅನಿಲ್ ಗೌಡರಿಗೆ ಸೇರಿದ 16 ಕುರಿಗಳು ಏಕಾಏಕಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಎರಡು ದಿನದ ಹಿಂದೆ ಅನಿಲ್ ಅವರ ಫಾರಂನಲ್ಲಿ 7 ಜಾನುವಾರು ಹಠಾತ್ತನೇ ಒದ್ದಾಡಿ ಸಾವನ್ನಪ್ಪಿದ್ದವು. ಈಗ 16 ಕುರಿಗಳು ಸಾವನ್ನಪ್ಪಿವೆ.

ಪಶುಸಂಗೋಪನಾ ಇಲಾಖೆ ಹುಣಸೂರು ವಿಭಾಗದ ಸಹಾಯಕ ನಿರ್ದೇಶಕ ಡಾ.ದೊಡ್ಡಮನಿ ಹೊಸಮಠ್ ಮಾತನಾಡಿ, ‘ಕುರಿಗಳ ಮಾಲೀಕ ಅನಿಲ್ ಗೌಡ ತನ್ನ ಫಾರಂನಲ್ಲಿ ಸಾಕಿರುವ 40 ಕುರಿಗಳಲ್ಲಿ ಕೆಲ ಕುರಿಗೆ ಹೊಟ್ಟೆ ಉಬ್ಬರಿಸಿಕೊಂಡಿದೆ ಎಂದು ನೀಡಿದ ದೂರಿನ ಮೇಲೆ ತಕ್ಷಣ ಬಿಳಿಕೆರೆ ಪಶುವೈದ್ಯಾಧಿಕಾರಿಗಳ ತಂಡದೊಂದಿಗೆ ಮಧ್ಯಾಹ್ನ 3 ಗಂಟೆಗೆ ಬಂದು ತುರ್ತು ಚಿಕಿತ್ಸೆ ನೀಡಿದ್ದೇವೆ. ಆದರೂ ಕುರಿಗಳು ಸಾವನ್ನಪ್ಪಿವೆ’ ಎಂದು ಹೇಳಿದರು.

ADVERTISEMENT

‘ಈ ಸಂಬಂಧ ಮೈಸೂರು ಪಶುಸಂಗೋಪನಾ ಪ್ರಯೋಗಾಲಯದ ವಿಜ್ಞಾನಿ ಡಾ.ಸುಮಂತ್ ಅವರನ್ನು ಕರೆಯಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದರು.

‘ಎರಡು ದಿನದ ಹಿಂದೆ 7 ಜಾನುವಾರುಗಳ ಸಾವಿನ ಸಂಬಂಧ ಈಗಾಗಲೇ ಮರಣೋತ್ತರ ಪರೀಕ್ಷೆಯಲ್ಲಿ ಸಂಗ್ರಹಿಸಿದ ಪದಾರ್ಥಗಳು ಪ್ರಯೋಗಾಲಯದಲ್ಲಿದ್ದು ವರದಿ ಬಂದ ಬಳಿಕ ಸಮಗ್ರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.

ಎರಡ್ಮೂರು ದಿನದಲ್ಲಿ ಆರು ಹಸು, ಒಂದು ಎಮ್ಮೆ, 16 ಕುರಿ ಸಾವನ್ನಪ್ಪಿವೆ. ಇದರಿಂದ ನನಗೆ ಏನು ಮಾಡಬೇಕು’ ಎಂದು ತಿಳಿಯದಾಗಿದೆ ಎಂದು ರೈತ ಅನಿಲ್‌ ಗೌಡ ಗೋಳಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.