ADVERTISEMENT

ಹುಣಸೂರು: ಪ್ಲಾಸ್ಟಿಕ್‌ ಬಾಟಲಿಯ ಸ್ವಾವಲಂಬಿ ಮನೆ!

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪರಿಸರಸ್ನೇಹಿ ಮನೆ ನಿರ್ಮಿಸಿದ ವಿದ್ಯಾರ್ಥಿಗಳು

ಎಚ್.ಎಸ್.ಸಚ್ಚಿತ್
Published 2 ಆಗಸ್ಟ್ 2023, 4:38 IST
Last Updated 2 ಆಗಸ್ಟ್ 2023, 4:38 IST
ರಾಜ್ಯ ಮಟ್ಟದಲ್ಲಿ ಯುವ ಸಂಸ್ಥೆ ಮತ್ತು ಯೂನಿಸೆಫ್ ಆಯೋಜಿಸಿದ್ದ ಶಾಲಾ ಅವಿಷ್ಕಾರ ಸ್ಪರ್ಧೆಯಲ್ಲಿ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಪ್ರಶಸ್ತಿ ಪಡೆದರು
ರಾಜ್ಯ ಮಟ್ಟದಲ್ಲಿ ಯುವ ಸಂಸ್ಥೆ ಮತ್ತು ಯೂನಿಸೆಫ್ ಆಯೋಜಿಸಿದ್ದ ಶಾಲಾ ಅವಿಷ್ಕಾರ ಸ್ಪರ್ಧೆಯಲ್ಲಿ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಪ್ರಶಸ್ತಿ ಪಡೆದರು   

ಹುಣಸೂರು: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಾಟಲಿ ಬಳಸಿ, ಕಡಿಮೆ ವೆಚ್ಚದಲ್ಲಿ ಪರಿಸರಸ್ನೇಹಿಯಾದ ‘ಸ್ವಾವಲಂಬಿ ಮನೆ’ ನಿರ್ಮಾಣದ ಪರಿಕಲ್ಪನೆಯನ್ನು ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ರೂಪಿಸಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಾದ ನಾಗರಾಜೇ ಅರಸು, ಅಭಯ್, ಲಿಖಿತ್ ರಾಜು, ಪ್ರವೀಣ್ ಮತ್ತು ಕುಶಾಲ್ ತಂಡ ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

10 ಬಾಟಲಿಗಳಿಗೆ ಮರಳು ಭರ್ತಿ ಮಾಡಿ ಕೋನಾಕಾರದಲ್ಲಿ ಜೋಡಿಸಿ ಪ್ಲಾಸ್ಟಿಕ್ ದಾರದಿಂದ ಬಿಗಿಯಾಗಿ ಕಟ್ಟಿ, ಅದಕ್ಕೆ ಪ್ಲಾಸ್ಟಿಕ್ ಮಿಶ್ರಿತ ಕೆಂಪುಮಣ್ಣಿನ ಗಿಲಾವ್ (ಪ್ಲಾಸ್ಟರಿಂಗ್‌) ಮಾಡಿ ಇಟ್ಟಿಗೆ ನಿರ್ಮಿಸಲಾಗುತ್ತದೆ. ಸಾಮಾನ್ಯ ಮನೆಗಿಂತ ಈ ಮನೆಗೆ ಅಡಿಪಾಯವನ್ನು ಎರಡುಪಟ್ಟು ನಿರ್ಮಿಸಬೇಕು. ಅಡಿಪಾಯದ ಮೇಲೆ ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಿದ ಇಟ್ಟಿಗೆಗಳನ್ನು ಇಟ್ಟು ಪ್ಲಾಸ್ಟರಿಂಗ್‌ ಮಾಡಬೇಕು. 20x20 ಅಡಿ ಜಾಗದಲ್ಲಿ ಮನೆ ನಿರ್ಮಿಸಲು ₹1 ಲಕ್ಷ ವೆಚ್ಚವಾಗಬಹುದು’ ಎಂದು ‘ಸ್ವಾಭಿಮಾನಿ ಮನೆ’ ತಂಡದ ನಾಯಕ ನಾಗರಾಜೇ ಅರಸು ‘ಪ್ರಜಾವಾಣಿ’ಗೆ ತಿಳಿಸಿದ.

ADVERTISEMENT

‘ಈ ಮನೆ ಮೇಲೆ ಸೌರಶಕ್ತಿ ಫಲಕ ಬಳಸಿ ವಿದ್ಯುತ್ ತಯಾರಿಕೆ, ಮಳೆ ನೀರು ಸಂಗ್ರಹ, ಮಳೆ ಸೂಚಕಗಳನ್ನು ಅಳವಡಿಸಿ ರೈತರಿಗೆ ಪೂರಕವಾದ ಸ್ವಾಭಿಮಾನಿ ಮನೆ ನಿರ್ಮಿಸಿದ್ದೇವೆ’ ಎಂದು ಹೇಳಿದ.

ಶಾಲೆಗೆ ಆವಿಷ್ಕಾರ ಪ್ರಶಸ್ತಿ: ‘ಯುವ ಸಂಸ್ಥೆ, ಯೂನಿಸೆಫ್ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜುಲೈ 22ರಿಂದ 24ರವರೆಗೆ ಆಯೋಜಿಸಿದ್ದ ಸ್ಕೂಲ್ ಇನೋವೇಶನ್ ಪ್ರೋಗ್ರಾಂ (ಶಾಲಾ ಆವಿಷ್ಕಾರ) ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 7,745 ಶಾಲೆಗಳಿಂದ 87,487 ವಿದ್ಯಾರ್ಥಿಗಳು ಮತ್ತು 9,444 ಶಿಕ್ಷಕರು ಮೆಂಟರ್‌ಗಳಾಗಿ ಪಾಲ್ಗೊಂಡಿದ್ದರು. ಒಂದು ತಿಂಗಳ ಕಾರ್ಯಾಗಾರದಲ್ಲಿ ಹೊಸ ಆಲೋಚನೆಗಳ 12,703 ಮಾದರಿಗಳನ್ನು ವಿವಿಧ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ್ದರು. ಅಂತಿಮ ಸುತ್ತಿಗೆ 31 ಮಾದರಿಗಳು ಆಯ್ಕೆಗೊಂಡು, ನಮ್ಮ ಶಾಲೆಗೆ ದ್ವಿತೀಯ ಸ್ಥಾನ ದೊರೆತಿದೆ’ ಎಂದು ಶಾಲೆಯ ವಿಜ್ಞಾನ ಶಿಕ್ಷಕಿ ಮತ್ತು ತರಬೇತುದಾರರಾದ ಶಶಿಕಲಾ ತಿಳಿಸಿದರು.

ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ಸ್ವಾವಲಂಬಿ ಮನೆಯ ಮಾದರಿ
ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಾಟಲಿ ಬಳಸಿ ಇಟ್ಟಿಗೆ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದರು
ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಾಟಲಿ ಬಳಸಿ ನಿರ್ಮಿಸಿದ ಇಟ್ಟಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.