
ಮೈಸೂರು: ರೈಲು ಪ್ರಯಾಣ ದರ ಏರಿಕೆಗೆ ಎಸ್‌ಯುಸಿಐಸಿ ಜಿಲ್ಲಾ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2025ರಲ್ಲಿ 2ನೇ ಬಾರಿಗೆ, ಸಿಬ್ಬಂದಿ ವೆಚ್ಚದ ಆರ್ಥಿಕ ಹೊರೆ ಪೂರೈಸುವ ಕುಂಟು ನೆಪವೊಡ್ಡಿ ಡಿ.26ರಿಂದ ಜಾರಿಗೆ ಬರುವಂತೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗೆ ಎಲ್ಲಾ ಶ್ರೇಣಿಗಳ ರೈಲು ಪ್ರಯಾಣ ದರವನ್ನು ಏಕಪಕ್ಷೀಯ ಮತ್ತು ಅನಿಯಂತ್ರಿತವಾಗಿ ಹೆಚ್ಚಿಸಿದೆ. ಇದು ಸರಿಯಲ್ಲ’ ಎಂದು ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ ಹೇಳಿದ್ದಾರೆ.
‘ದರ ಏರಿಕೆಯನ್ನು ಸಂಪ್ರದಾಯದಂತೆ ಮಾಡಿಕೊಳ್ಳಲಾಗಿದೆ. ಇನ್ನೊಂದೆಡೆ ರೈಲು ಪ್ರಯಾಣವು ಪ್ರಯಾಣಿಕರಿಗೆ ಇಂದಿಗೂ ದುಃಸ್ವಪ್ನವಾಗಿಯೇ ಮುಂದುವರಿದಿದೆ. ರೈಲು ಅಪಘಾತಗಳು ಹೆಚ್ಚುತ್ತಿವೆ. ಸಮಯಪಾಲನೆಯು ಗತಕಾಲದ ನೆನಪಾಗಿದೆ. ಬೋಗಿಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
‘ಶೌಚಾಲಯಗಳಲ್ಲಿ ನೈರ್ಮಲ್ಯವಿಲ್ಲ. ಪ್ಲಾಟ್‌ಫಾರ್ಮ್‌ಗಳು ಕೊಳಕಾಗಿವೆ. ವಿಶ್ರಾಂತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಆಹಾರ ದುಬಾರಿಯಾಗಿದ್ದರೂ ಗುಣಮಟ್ಟವಿಲ್ಲ. ಪ್ರಯಾಣಿಕರ ಸುರಕ್ಷತೆ ಅಪಾಯದಲ್ಲಿದೆ’ ಎಂದು ದೂರಿದ್ದಾರೆ.
‘ಜನರ ಅಗತ್ಯತೆಗಳ ಈ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಬದಲು, ದರ ಏರಿಸಿ ಜನರಿಗೆ ತೊಂದರೆ ಕೊಡುವುದೇ ಸರ್ಕಾರದ ಕಾಳಜಿಯಾಗಿದೆ’ ಎಂದು ಟೀಕಿಸಿದ್ದಾರೆ.
‘ಪ್ರಯಾಣ ದರದ ಈ ಏರಿಕೆಯನ್ನು ತಡೆಹಿಡಿಯಬೇಕು, ಅಸ್ತಿತ್ವದಲ್ಲಿರುವ ಪ್ರಯಾಣ ವೆಚ್ಚವನ್ನು ಇಳಿಸಬೇಕು, ಸುರಕ್ಷತೆ, ಸಮಯಪಾಲನೆ ಹಾಗೂ ಸೂಕ್ತ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರು ಪ್ರಬಲ ಚಳವಳಿಗೆ ಇಳಿಯಬೇಕು’ ಎಂದು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.