ADVERTISEMENT

ಒಳ್ಳೆಯ ಅಭ್ಯಾಸ: ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 15:59 IST
Last Updated 1 ಆಗಸ್ಟ್ 2022, 15:59 IST
ಮಹಾರಾಜ ಕಾಲೇಜಿನಲ್ಲಿ  ಸೋಮವಾರ ನಡೆದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ ಉದ್ಘಾಟಿಸಿದರು. ಡಾ.ರಮೇಶ್, ಎನ್‌ಎಸ್‌ಎಸ್‌ ಅಧಿಕಾರಿ ಸರೇಶ್, ಡಾ.ಸುರೇಶ್, ಪ್ರೊ.ಎ.ವಿ.ಬ್ರ್ಯಾಗ್ಸ್ ಮತ್ತು ಟಿ.ಕೆ.ಹರೀಶ್ ಇದ್ದಾರೆ/ ಪ್ರಜಾವಾಣಿ ಚಿತ್ರ
ಮಹಾರಾಜ ಕಾಲೇಜಿನಲ್ಲಿ  ಸೋಮವಾರ ನಡೆದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ ಉದ್ಘಾಟಿಸಿದರು. ಡಾ.ರಮೇಶ್, ಎನ್‌ಎಸ್‌ಎಸ್‌ ಅಧಿಕಾರಿ ಸರೇಶ್, ಡಾ.ಸುರೇಶ್, ಪ್ರೊ.ಎ.ವಿ.ಬ್ರ್ಯಾಗ್ಸ್ ಮತ್ತು ಟಿ.ಕೆ.ಹರೀಶ್ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬಾರದು. ಶಿಕ್ಷಣದೊಂದಿಗೆ ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾರಾಜ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಮಹಾರಾಜ ಕಾಲೇಜು ಜೂನಿಯರ್ ಬಿಎ ಹಾಲ್‌ನಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾಂತ ಶಿವಯೋಗಿಗಳು ಹಳ್ಳಿ ಹಳ್ಳಿಗೆ ಹೋಗಿ ದುಶ್ಚಟಗಳನ್ನು ಬಿಟ್ಟು ಬಿಡಿ ಎಂದು ತಿಳಿ ಹೇಳಿ ಜನರ ಮನಪರಿವರ್ತನೆ ಮಾಡಿಸುತ್ತಿದ್ದರು. ಶ್ರೀಗಳು ಮಠಗಳನ್ನು ಸ್ಥಾಪಿಸಿ ಶಿಕ್ಷಣ ಮತ್ತು ದಾಸೋಹದಲ್ಲಿ ತೊಡಗಿದ್ದಾರೆ. ದುರ್ಜನರ ಸಹವಾಸ ದುಶ್ಚಟಗಳಿಗೆ ಎಡೆ ಮಾಡಿಕೊಡುತ್ತದೆ. ಹೀಗಾಗಿ, ಒಳ್ಳೆಯ ಸ್ನೇಹಿತರನ್ನು ಹೊಂದಬೇಕು. ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎ.ವಿ.ಬ್ರ್ಯಾಗ್ಸ್, ‘ಯೌವ್ವನದಲ್ಲಿ ಮನಸ್ಸು ಕೆಟ್ಟ ವಿಷಯಗಳಿಗೆ ಆಕರ್ಷಿತರಾಗುವುದು ಹೆಚ್ಚು. ಅದಕ್ಕೆ ಕಡಿವಾಣ ಹಾಕಬೇಕು. ಜಾಹೀರಾತುಗಳಿಂದ ಹೆಚ್ಚು ಪ್ರಭಾವಿತರಾಗಬಾರದು’ ಎಂದು ಕಿವಿಮಾತು ಹೇಳಿದರು.

‘ದುಶ್ಚಟಗಳಿಗೆ ಒಳಗಾಗುವುದು ಬಹಳ ಸುಲಭ. ಆದರೆ, ಇದರಿಂದ ಹೊರಬರುವುದು ಬಹಳ ಕಷ್ಟ. ಕಾಲೇಜು ಹಂತದಲ್ಲಿ ಶೇ.23ರಷ್ಟು ವಿದ್ಯಾರ್ಥಿಗಳು ಮದ್ಯಪಾನದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯ’ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ರವೀಶ್ ತಿಳಿಸಿದರು.

‘ಹುಟ್ಟಿನಿಂದ ಯಾರೂ ವ್ಯಸನಿಗಳಲ್ಲ. ಮದ್ಯ ಸೇವನೆಯು ಹಂತ ಹಂತವಾಗಿ ಮಾನವನ ದೇಹವನ್ನು ನಾಶ ಮಾಡುತ್ತಾ ಹೋಗುತ್ತದೆ. ಇದರಿಂದ ಆಯಸ್ಸು ಕೂಡ ಕಡಿಮೆ ಆಗುತ್ತದೆ. ಒಂದು ಸಿಗರೇಟಿನಲ್ಲಿ ನೂರಾರು ವಿಷಕಾರಕ ಅಂಶಗಳಿವೆ. ಹೀಗಾಗಿ, ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರಬೇಕು’ ಎಂದರು.

ಎನ್‌ಎಸ್‌ಎಸ್‌ ಘಟಕದ ಮುಖ್ಯಸ್ಥ ಸುರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಹದೇವ ಪ್ರಸಾದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.