ADVERTISEMENT

ಆ್ಯಪ್‌ ತಾಂತ್ರಿಕ ತೊಂದರೆ | ದೊರಕದ ಮನೆ ನಂಬರ್‌: ಸಮೀಕ್ಷೆ ಸ್ಥಗಿತ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ಕೆ.ನರಸಿಂಹ ಮೂರ್ತಿ
Published 26 ಸೆಪ್ಟೆಂಬರ್ 2025, 3:50 IST
Last Updated 26 ಸೆಪ್ಟೆಂಬರ್ 2025, 3:50 IST
<div class="paragraphs"><p>ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ</p></div>

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ

   

ಮೈಸೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಗತ್ಯವಿರುವ ಮನೆ ಸಂಖ್ಯೆಯು (ಯುಎಚ್‌ಐಡಿ–ಯುನಿಕ್‌ ಐಡೆಂಟಿಫಿಕೇಶನ್‌ ನಂಬರ್‌) ಆ್ಯಪ್‌ನಲ್ಲಿ ಬಾರದೆ ಗುರುವಾರ ಸಮೀಕ್ಷೆಯು ಸ್ಥಗಿತಗೊಂಡಿತ್ತು. ‘ಯುಎಚ್‌ಐಡಿ ನಂಬರ್‌ ಬರುತ್ತಿಲ್ಲ, ಏನು ಮಾಡಬೇಕು’ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಸಂಜೆಯಾದರೂ ಉತ್ತರವಿರಲಿಲ್ಲ.

‘ಆ್ಯಪ್‌ನಲ್ಲಿ ಯುಎಚ್‌ಐಡಿ ನಂಬರ್‌ ನಮೂದಿಸುವ ಅವಕಾಶವೇ ಸಿಗಲಿಲ್ಲ. ಬದಲಿಗೆ, ‘ಸಮೀಕ್ಷೆ ಮುಗಿದಿದೆ (copleted) ಕರಡು (draft)’ ಎಂಬ ಮಾಹಿತಿಯಷ್ಟೇ ಕಾಣಿಸುತ್ತಿತ್ತು. ಹೊಸ ಸರ್ವೆ ಆರಂಭಿಸಿ ಎಂಬ ಅಡಿ ಸಾಲು ನೋಡಿ ಸಾಕಾಯಿತು’ ಎಂದು ಮೈಸೂರು, ಚಾಮರಾಜನಗರ, ಬಳ್ಳಾರಿ, ಹಾವೇರಿ, ಉಡುಪಿ, ರಾಮನಗರ, ಕೋಲಾರ ಜಿಲ್ಲೆಯ ಕೆಲವು ಸಮೀಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಯುಎಚ್‌ಐಡಿ ಮಾಹಿತಿ ಸಿಗುತ್ತಿಲ್ಲವೆಂಬ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರ ದೂರನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತುರ್ತಾಗಿ ಸರಿಪಡಿಸಲಾಗುತ್ತದೆ. ಹೊಸದಾಗಿ ಯುಎಚ್‌ಐಡಿ ನಂಬರ್‌ ಅನ್ನು ರಚಿಸಿಕೊಂಡು ಸಮೀಕ್ಷೆ ಮಾಡಿ‌ಸಿ ಎನ್ನುತ್ತಿದ್ದಾರೆ. ಹೀಗೆ ಮಾಡಿದ ಸಮೀಕ್ಷೆ ಸಿಂಧುವಾಗುತ್ತದೆಯೇ ಎಂಬ ಖಚಿತತೆಯೂ ಇಲ್ಲ’ ಎಂದು ಸಮೀಕ್ಷದಾರರಿಗೆ ತರಬೇತಿ ನೀಡಿರುವ ಬಳ್ಳಾರಿ ಜಿಲ್ಲೆಯ ಮಾಸ್ಟರ್‌ ಟ್ರೈನರ್‌ ಒಬ್ಬರು ಅಭಿಪ್ರಾಯಪಟ್ಟರು. 

ಮೊದಲು ಸರಿಪಡಿಸಿ: ನಾಲ್ಕು ದಿನವಾದರೂ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗದೆ ಬೇಸತ್ತಿರುವ ಶಿಕ್ಷಕರು, ‘ಮೊದಲು ಆ್ಯಪ್‌ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ನೆಮ್ಮದಿಯಿಂದ ಸಮೀಕ್ಷೆ ನಡೆಸಲು ಅನುವಾಗುವಂತೆ ವ್ಯವಸ್ಥೆ ಮಾಡಿ’ ಎಂದು ಆಗ್ರಹಿಸಿ ರಾಜ್ಯದ ಕೆಲವೆಡೆ ಬಿಇಒ, ತಹಶೀಲ್ದಾರ್‌ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಲು ಆರಂಭಿಸಿದ್ದಾರೆ. ಗುರುವಾರ ಕೂಡ್ಲಿಗಿ ತಹಶೀಲ್ದಾರ್‌ಗೆ, ಮಂಗಳೂರು ಬಿಇಒಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ಶಿಕ್ಷಕರು ಕೊಡಗು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಮೇಲ್ವಿಚಾರಕರಿಲ್ಲ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳನ್ನು (ಸಿಆರ್‌ಪಿ) ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ. ಆದರೆ ಕೆಲವೆಡೆ ಇನ್ನೂ ನಿಯೋಜಿಸಿಲ್ಲ ಎಂಬ ದೂರುಗಳಿವೆ. ಮೈಸೂರು ನಗರ ಹಾಗೂ ಕುಂದಾಪುರದಲ್ಲಿ ಇನ್ನೂ ನಿಯೋಜಿಲ್ಲ ಎಂದು ಸಮೀಕ್ಷೆದಾರರು ದೂರಿದ್ದಾರೆ.

ಸ್ಥಳದ ಮಾಹಿತಿಯೇ ನಾಪತ್ತೆ: ‘ನಿನ್ನೆವರೆಗೂ ಆ್ಯಪ್‌ನಲ್ಲಿ ಒಂದೊಂದು ದಿನ ಒಂದೊಂದು ಸ್ಥಳದ ಮಾಹಿತಿ ಇರುತ್ತಿತ್ತು. ಎಲ್ಲಿ ಸಮೀಕ್ಷೆ ಮಾಡಬೇಕೆಂದು ತಿಳಿಯದೇ ಗೊಂದಲವಾಗಿತ್ತು.  ಇಂದು ಯುಎಚ್‌ಐಡಿ ಜೊತೆಗೆ ಸ್ಥಳದ ಮಾಹಿತಿಯೇ ಆ್ಯಪ್‌ನಲ್ಲಿ ತೋರಿಸಿಲ್ಲ. ಒಟ್ಟಾರೆ ನಾವು ಇನ್ನೂ ಸಮೀಕ್ಷೆಯನ್ನೇ ಆರಂಭಿಸಿಲ್ಲ’ ಎಂದು ಮೈಸೂರು ನಗರದ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದರು.

ತಾಂತ್ರಿಕ ತೊಂದರೆಯಿಂದ ನಾಲ್ಕು ದಿನಗಳಲ್ಲಿ ಕೇವಲ ಎರಡು ಮನೆ ಸಮೀಕ್ಷೆಯಷ್ಟೇ ಮಾಡಿದ್ದೇನೆ. ಗುರುವಾರ ಸಮೀಕ್ಷೆ ಮಾಡಲು ಆಗಲಿಲ್ಲ
ಚನ್ನಪಟ್ಟಣದ ಸಮೀಕ್ಷಕ
ಆ್ಯಪ್‌ನ ತಾಂತ್ರಿಕ ಲೋಪಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಮೀಕ್ಷೆಯನ್ನು ಆರಂಭಿಸಬೇಕಿತ್ತು. ಇನ್ನಾದರೂ ಆಯೋಗ ಸರಿಪಡಿಸಲು ಕ್ರಮ ವಹಿಸಬೇಕು
ಮಾಸ್ಟರ್‌ ಟ್ರೈನರ್‌, ಬಳ್ಳಾರಿ
ಸಮೀಕ್ಷಕರು ಅನುಭವಿಸಿದ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ, ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಒಟಿಪಿ ಬದಲಿಗೆ ‌ಪಿನ್ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ
ವೆಂಕಟ್ ರಾಜಾ, ಮೈಸೂರು ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತ

‘ಮೈಸೂರಿನಲ್ಲಿ ಶುರುವಾಗದ ಸಮೀಕ್ಷೆ’

‘ಮೈಸೂರು ಜಿಲ್ಲಾ ಕೇಂದ್ರದಲ್ಲಿ ಸಮೀಕ್ಷೆ ಇನ್ನೂ ಆರಂಭವೇ ಆಗಿಲ್ಲ. ಮೊದಲ ದಿನದಿಂದಲೂ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಬೆರಳೆಣಿಕೆಯಷ್ಟು ಸಮೀಕ್ಷೆಯಷ್ಟೇ ಆಗಿದೆ’ ಎಂದು ಶಿಕ್ಷಕರು ಹೇಳುತ್ತಾರೆ.

ಗುರುವಾರ ಮಧ್ಯಾಹ್ನ ವಾಟ್ಸ್‌ಅಪ್‌ ಗುಂಪಿನಲ್ಲಿ ಅಧಿಕಾರಿಗಳು ‘ನಿಮಗೆ ಮೇಲ್ವಿಚಾರಕರು ಕರೆ ಮಾಡುತ್ತಾರೆ. ಅವರ ಬಳಿ ಸಮಸ್ಯೆ ಹೇಳಿಕೊಳ್ಳಿ’ ಎಂದಷ್ಟೇ ತಿಳಿಸಿದ್ದರು. ಕೆಲವರಿಗಷ್ಟೇ ಸಿಆರ್‌ಪಿಗಳ ಕರೆ ಬಂದಿತ್ತು. ಉಳಿದವರಿಗೆ ತಮ್ಮ ಮೇಲ್ವಿಚಾರಕರು ಯಾರು ಎಂಬ ಮಾಹಿತಿಯು ದೊರಕಲಿಲ್ಲ. ಸಮಸ್ಯೆ ಕುರಿತು ಯಾರ ಬಳಿ ಅಹವಾಲು ಹೇಳಿಕೊಳ್ಳಬೇಕು ಎಂಬ ಪ್ರಶ್ನೆಗೂ ಶಿಕ್ಷಕರಲ್ಲಿ ಉತ್ತರವಿರಲಿಲ್ಲ.

‘ಮಹಾನಗರ ಪಾಲಿಕೆಗೆ ಹೋಗಿ ವಿಚಾರಿಸಿ ಎನ್ನುತ್ತಾರೆ ಅಲ್ಲಿ ಹೋದರೆ ಅದಕ್ಕೆ ನಿಯೋಜಿತರಾದ ಅಧಿಕಾರಿ ಯಾರು ಎಂದು ಹೇಳುವವರೇ ಇಲ್ಲ. ಕನಿಷ್ಠ ಹೆಲ್ಪ್‌ ಡೆಸ್ಕ್‌ ಕೂಡ ಸ್ಥಾಪಿಸದೆ ಸಮೀಕ್ಷೆ ನಡೆಸುತ್ತಿರುವುದು ಶೋಚನೀಯ’ ಎಂದು ಶಿಕ್ಷಕರೊಬ್ಬರು ವಿಷಾದಿಸಿದರು.

‘ಆಫ್‌ಲೈನ್ ಸಮೀಕ್ಷೆಗೆ ಅವಕಾಶ ಕೊಡಿ’

‘ಆನ್‌ಲೈನ್‌ ಸಮೀಕ್ಷೆಗೆ ಎದುರಾದ ತೊಂದರೆಗಳಿಂದ ರೋಸತ್ತ ಸಮೀಕ್ಷೆದಾರರು, ಆಫ್‌ಲೈನ್‌ ಸಮೀಕ್ಷೆ ನಡೆಸಿದರೆ ಗುರಿಗಿಂತಲೂ ದುಪ್ಪಟ್ಟು ಮನೆಗಳ ಸಮೀಕ್ಷೆ ನಡೆಸಲು ಸಿದ್ಧ’ ಎಂದು ತಮ್ಮ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಪ್ರತಿಪಾದಿಸಿದ್ದಾರೆ.

‘ಹಿಂದಿನ ವರ್ಷಗಳಲ್ಲಿ ಬಹಳ ಅಚ್ಚುಕಟ್ಟಾಗಿ ಆಫ್‌ಲೈನ್‌ ಸಮೀಕ್ಷೆಗಳನ್ನು ನಡೆಸಿದ್ದೇವೆ. ಈಗಿನ ಆ್ಯಪ್‌ನಿಂದ ನೆಮ್ಮದಿ ಹಾಳಾಗಿದೆ ಎಂದರೂ ನಮ್ಮನ್ನು ಬಿಟ್ಟಿಲ್ಲ. ಇನ್ನೊಂದು ದಿನ ನೋಡಿ ತಾಲ್ಲೂಕು ಆಫೀಸಿನ ಮುಂದೆ ವಿಷ ಸೇವಿಸುತ್ತೇನೆ’ ಎಂದು ಗುಂಪೊಂದರಲ್ಲಿ ಶಿಕ್ಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.