ADVERTISEMENT

ಕ್ರೆಡೆಲ್‌ ಅಧಿಕಾರಿ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 19:48 IST
Last Updated 29 ನವೆಂಬರ್ 2022, 19:48 IST
ಡಿ.ಕೆ.ದಿನೇಶ್‌ ಕುಮಾರ್‌
ಡಿ.ಕೆ.ದಿನೇಶ್‌ ಕುಮಾರ್‌   

ಮೈಸೂರು: ಇಲ್ಲಿನ ವಿಜಯನಗರ ನಿವಾಸಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್‌ಇಡಿಎಲ್‌) ಯೋಜನಾ ನಿರ್ದೇಶಕ ಡಿ.ಕೆ.ದಿನೇಶ್‌ ಕುಮಾರ್ (51) ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ಸರಸ್ವತಿ‍ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ದಿನೇಶ್‌ ಅವರು ಬೆಂಗಳೂರಿನ ನಾಗರಬಾವಿಯಲ್ಲಿರುವ ಕೆಆರ್‌ಇಡಿಎಲ್‌ ಅಧಿಕಾರಿಯಾಗಿದ್ದರು.

‘ದಿನೇಶ್‌ ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದು, ಸೋಮವಾರ‍ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ನೋಡಿ ಮೂರ್ಛೆ ಹೋದೆವು ಎಂದು ಪತ್ನಿ ಹೇಳಿಕೆ ನೀಡಿದ್ದಾರೆ. ಅಸ್ವಸ್ಥಗೊಂಡಿರುವ ಪತ್ನಿ ಹಾಗೂ ಪುತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ದಿನೇಶ್‌ ಅವರ ಮೃತದೇಹ ಊದಿಕೊಂಡಿದ್ದು, ದೇಹದ ಹಲವು ಭಾಗಗಳಿಗೆ ಗಾಯಗಳಾಗಿದ್ದವು. ಮೃತಪಟ್ಟು 14 ಗಂಟೆಗಿಂತಲೂ ಹೆಚ್ಚಿನ ಸಮಯವಾಗಿರುವುದಾಗಿ
ವೈದ್ಯರು ತಿಳಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಮೃತರ ಪತ್ನಿ ನೀಡಿದ ಹೇಳಿಕೆಗೂ, ವೈದ್ಯರ ನೀಡಿರುವ ಹೇಳಿಕೆಗೂ ಹೊಂದಾಣಿಕೆಯಾಗುತ್ತಿಲ್ಲ. ಮೃತಪಟ್ಟಿರುವ ಕಾರಣ ಹಾಗೂ ಸಮಯವನ್ನು ಪತ್ನಿ ಹೇಳುತ್ತಿಲ್ಲ. ಕೌನ್ಸಲಿಂಗ್ ಮಾಡುವಂತೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಲಾಗಿದೆ. ಶವಪರೀಕ್ಷೆ ವರದಿ ಆಧರಿಸಿ ತನಿಖೆ ನಡೆಸಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ದಿನೇಶ್‌ ಅವರದು ಸಹಜ ಸಾವಲ್ಲ, ಕೊಲೆ’ ಎಂದು ಆರೋಪಿಸಿ ಮೃತರಸೋದರ ಮಾವ ಎಚ್‌.ಎಂ.ನಾರಾಯಣ ಅವರು ಠಾಣೆಗೆ ದೂರು ನೀಡಿದ್ದಾರೆ. ಸಿಆರ್‌ಪಿಸಿ 174 (ಸಿ) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.‌

ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಮೃತರ ಶವಪರೀಕ್ಷೆ ಮಂಗಳವಾರ ನಡೆಯಿತು. ಅಂತ್ಯಕ್ರಿಯೆ ಸ್ವಗ್ರಾಮ ದೊಡ್ಡಪಾಳ್ಯದಲ್ಲಿ ನಡೆಯಿತು.

ನಾಲ್ಕೈದು ಜನರಿಂದ ಕೃತ್ಯ: ಆರೋಪ

‘ಶನಿವಾರ ಬೆಂಗಳೂರಿನಿಂದ ಬಂದ ದಿನೇಶ್ ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿದ್ದ ಸ್ವಂತ ಕಟ್ಟಡವನ್ನು ಪರಿಶೀಲಿಸಿ, ಮನೆಗೆ ತೆರಳಿದ್ದು, ಅಲ್ಲಿಂದ ಯಾರಿಗೂ ಲಭ್ಯವಾಗಿಲ್ಲ. ಅವರ ಫೋನ್‌ ಕೂಡ ಶನಿವಾರ ರಾತ್ರಿಯಿಂದಲೇ ಬಂದ್ ಆಗಿದೆ. ಅವರು ಮೃತಪಟ್ಟಿರುವ ವಿಷಯ ಸೋಮವಾರ ಮಧ್ಯಾಹ್ನ 2 ಗಂಟೆಗೆ ನನಗೆ ಗೊತ್ತಾಗಿದೆ.ಮೃತದೇಹದಲ್ಲಿ ಗಾಯಗಳಾಗಿದ್ದವು. ತಲೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದು, ರಕ್ತಸ್ರಾವವಾಗಿದೆ. ಅದು ಸಹಜ ಸಾವಲ್ಲ’ ಎಂದು ದೂರುದಾರ ಎಚ್‌.ಎಂ.ನಾರಾಯಣ ಹೇಳಿದರು.

‘ಪೊಲೀಸರ ಗಮನಕ್ಕೆ ತಾರದೇ ಮೃತದೇಹ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಆಂಬುಲೆನ್ಸ್‌ ಬಳಸದೇ ಖಾಸಗಿ ಆಂಬುಲೆನ್ಸ್‌ ಬಳಸಲಾಗಿದೆ.ಸಹಜ ಸಾವಾಗಿದ್ದರೆ, ಸಂಬಂಧಿಕರಿಗೆ ವಿಷಯ ತಿಳಿಸಬೇಕಿತ್ತು. ಅದನ್ನೂ ಪತ್ನಿ ಹಾಗೂ ಮಗ ಮಾಡಿಲ್ಲ. ಅಲ್ಲದೆ, ಮನೆ ಕೆಲಸದವರಿಗೆ ಮಲಗುವ ಕೋಣೆಯನ್ನು ಸ್ವಚ್ಛಗೊಳಿಸಲು ಬಿಟ್ಟಿಲ್ಲ.ನಾಲ್ಕೈದು ಮಂದಿ ಸೇರಿ ಕೃತ್ಯ ಎಸಗಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.