ADVERTISEMENT

ಸುತ್ತೂರು: ಭಜನಾ ಮೇಳ, ದೇಸಿ ಆಟ, ಸೋಬಾನೆ ಪದ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:24 IST
Last Updated 17 ಜನವರಿ 2026, 5:24 IST
ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಶೋಭಾ ಕರಂದ್ಲಾಜೆ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ತೇಜಸ್ವಿ ಸೂರ್ಯ ದೇಶಿ ಕ್ರೀಡೆ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು
ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಶೋಭಾ ಕರಂದ್ಲಾಜೆ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ತೇಜಸ್ವಿ ಸೂರ್ಯ ದೇಶಿ ಕ್ರೀಡೆ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು   

ಸುತ್ತೂರು (ಮೈಸೂರು ಜಿಲ್ಲೆ): ‘ಅಧ್ಯಾತ್ಮ ಭಾರತದ ಆತ್ಮ, ಅದರಲ್ಲಿ ದೇಶದ ಅಸ್ತಿತ್ವ ನಿಂತಿದೆ. ಅದನ್ನು ಉಳಿಸಿ, ಬೆಳೆಸುತ್ತಿರುವ ಮಠಗಳಿಗೆ ಶ್ರದ್ಧಾ, ಭಕ್ತಿಯಿಂದ ನಡೆದುಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಾಗಿ ಬೀಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಕಾವಿ ಬಟ್ಟೆ ಉಳಿದರೆ ದೇಶ ಉಳಿಯುತ್ತದೆ. ಹಿಂದೆ ನಮ್ಮ ದೇಶದ ಭಾಗವಾಗಿದ್ದು, ಈಗ ವಿಭಜನೆಯಾಗಿರುವ ದೇಶದಲ್ಲಿ ಕಾವಿ ಬಟ್ಟೆ, ದೇವಸ್ಥಾನ ಇಲ್ಲ. ಹೀಗಾಗಿ ನಮ್ಮ ಹಬ್ಬ, ಸಂಸ್ಕೃತಿ ಉಳಿದಿಲ್ಲ. ದೇಶದಲ್ಲಿ ಆಚಾರ, ವಿಚಾರ ಉಳಿಸುವ ಕೆಲಸವಾಗಬೇಕು’ ಎಂದರು.

ADVERTISEMENT

‘ಸುತ್ತೂರು ನಮ್ಮೂರಿಗೆ ಸೀಮಿತವಾಗಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿದೆ. ಪುಸ್ತಕ ಶಿಕ್ಷಣದೊಂದಿಗೆ ಮೌಲ್ಯ ಶಿಕ್ಷಣ ನೀಡುತ್ತಿದೆ. ಇಲ್ಲಿನ ಜಾತ್ರೆಯು ಗ್ರಾಮೀಣ ಜನರಿಗೆ ಬೇಕಾದ ಮಾಹಿತಿ ಮತ್ತು ಜ್ಞಾನ ಹಂಚುತ್ತಿದೆ. ಸರ್ಕಾರದ ಯೋಜನೆ ಹಾಗೂ ಸುತ್ತೂರು ಮಠ ಜೊತೆಯಾಗಿ ನಡೆದರೆ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ತಲುಪಿಸಲು ಸಾಧ್ಯ’ ಎಂದು ಹೇಳಿದರು.

‘ದೇವಸ್ಥಾನ ಹಾಗೂ ಕಾವಿ ಬಟ್ಟೆ ಜನರಿಗೆ ಸಂಸ್ಕಾರ ನೀಡುತ್ತವೆ. ಇದೇ ಹಿನ್ನೆಲೆಯಲ್ಲಿ ಸ್ವಾಮೀಜಿ ನ್ಯೂಯಾರ್ಕ್‌ನಲ್ಲಿ ದೇವಾಲಯ ಕಟ್ಟುತ್ತಿದ್ದಾರೆ. ಸರ್ಕಾರ ಮಾಡಬಹುದಾದ ಕೆಲಸವನ್ನು ಮಠಗಳು ಮಾಡುತ್ತಿವೆ. ಆರೋಗ್ಯ, ಶಿಕ್ಷಣ, ದಾಸೋಹ ಮಾಡಿ ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಸ್ವಾಮೀಜಿಗಳನ್ನು ಗೌರವದಿಂದ ಕಾಣುವುದೇ ದೇಶಕ್ಕೆ ಮಾಡುವ ಸೇವೆ’ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ದೇಸಿ ಕ್ರೀಡೆಗಳಲ್ಲಿ ವೈಜ್ಞಾನಿಕ ಸತ್ಯಗಳು ಅಡಗಿವೆ. ಈಚೆಗೆ ಪ್ರಧಾನಿ ಮೋದಿ ಸಭೆಯೊಂದರಲ್ಲಿ ದೇಶದ ಪ್ರತಿ ಬುಡಕಟ್ಟು ಸಮುದಾಯದಲ್ಲೂ ಒಂದೊಂದು ಅಪರೂಪದ ಕ್ರೀಡೆಗಳಿವೆ. ಪೌರಾಣಿಕ ಪಾತ್ರಗಳನ್ನು ಇಟ್ಟುಕೊಂಡು ಗೇಮ್‌ಗಳನ್ನು ಸೃಷ್ಟಿಸಿ, ವಿದೇಶಿ ಗೇಮಿಂಗ್‌ಗಳಿಗೆ ಸ್ಪರ್ಧೆ ನೀಡಬಹುದು ಎಂದಿದ್ದಾರೆ. ದೇಶಿ ಕ್ರೀಡೆ ಮರೆಯಾಗುತ್ತಿರುವ ಕಾಲದಲ್ಲಿ ಮಠವೊಂದರ ಈ ಪ್ರಯತ್ನ ಶ್ಲಾಘನೀಯ. ಇದರ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿ, ಇತರೆಡೆಗಳಲ್ಲೂ ನಡೆಯುವಂತೆ ಮಾಡುತ್ತೇನೆ’ ಎಂದು ಹೇಳಿದರು.

ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂದೇಶ ನೀಡಿದರು.

ಊಟಿ ಶಾಸಕ ಆರ್‌.ಗಣೇಶ್‌, ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್‌ ಪರ್ವತಂ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್‌, ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು, ಉದ್ಯಮಿ ಎಚ್‌.ಎಸ್‌.ರಾಘವೇಂದ್ರರಾವ್‌, ಕೆಪಿಸಿಸಿ ಸದಸ್ಯ ಪ್ರಭುದೇವ ಭಾಗವಹಿಸಿದ್ದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೂ ಏಕಚಿತ್ತದಿಂದ ಕೆಲಸ ಮಾಡುತ್ತಾರೆ. ಅವರು
ನಮಗೆ ಮಾದರಿ

–ಬಸವರಾಜ ಬೊಮ್ಮಾಯಿ ಸಂಸದ‌