ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಪ್ರತಿ ದಿನವೂ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ– ‘ತ್ರಿಕಾಲ ಪ್ರಸಾದ’ ವ್ಯವಸ್ಥೆ ಮಾಡಲಾಗಿದೆ.
ಆಹಾರ ತಯಾರಿಕೆಗೆ ಅಗತ್ಯವಿರುವ ದಿನಸಿ ಮೊದಲಾದ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಅಡುಗೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
‘ಒಟ್ಟು 1 ಸಾವಿರ ಕ್ವಿಂಟಲ್ ಅಕ್ಕಿ, 250 ಕ್ವಿಂಟಲ್ ತೊಗರಿ ಬೇಳೆ, 1,500 ಕ್ಯಾನ್ (ತಲಾ 20 ಲೀಟರ್) ಅಡುಗೆ ಎಣ್ಣೆ, 12 ಟನ್ ಬೆಲ್ಲ, 3,500 ಕೆ.ಜಿ. ಖಾರದಪುಡಿ, 110 ಕ್ವಿಂಟಲ್ ಕಡ್ಲೆ ಹಿಟ್ಟು, 200 ಕ್ವಿಂಟಲ್ ಸಕ್ಕರೆ, 500 ಕೆ.ಜಿ. ‘ನಂದಿನಿ’ ತುಪ್ಪ, ತಲಾ 800 ಕೆ.ಜಿ. ದ್ರಾಕ್ಷಿ ಮತ್ತು ಗೋಡಂಬಿ, 25ಸಾವಿರ ತೆಂಗಿನಕಾಯಿ ಮತ್ತು 5 ಸಾವಿರ ಕೆ.ಜಿ. ಉಪ್ಪಿನಕಾಯಿ ದಾಸ್ತಾನು ಮಾಡಲಾಗಿದೆ. 10ಸಾವಿರ ಲೀಟರ್ ಹಾಲು, 30ಸಾವಿರ ಲೀಟರ್ ಮೊಸರು ಬಳಸಲಾಗುವುದು’ ಎಂದು ದಾಸೋಹ ಸಮಿತಿಯ ಸಂಚಾಲಕ ಸುಬ್ಬಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
‘ಜ.25ರಿಂದಲೇ ದಾಸೋಹ ಆರಂಭಗೊಳ್ಳಲಿದೆ. ಬೆಳಿಗ್ಗೆ ಶುರುವಾದರೆ ತಡರಾತ್ರಿವರೆಗೂ ಪ್ರಸಾದ ಕೊಡಲಾಗುವುದು. ಅಡುಗೆ ತಯಾರಿಗೆಂದೇ 500 ಮಂದಿ ಕಾರ್ಯನಿರ್ವಹಿಸಲಿದ್ದು, ಬಡಿಸುವ ಕೆಲಸದಲ್ಲಿ 5ಸಾವಿರ ಮಂದಿ ಸ್ವಯಂಸೇವಕರಾಗಿ ಪಾಲ್ಗೊಳ್ಳುವರು. ಪಾತ್ರೆಗಳು ಸೇರಿದಂತೆ ಒಟ್ಟು ಒಂದು ಕೋಟಿಯಷ್ಟು ಪದಾರ್ಥಗಳನ್ನು ಬಳಸಲಾಗುವುದು. ಬೆಂಗಳೂರು, ಮೈಸೂರು, ಪಾಂಡವಪುರ, ಗುಂಡ್ಲುಪೇಟೆ, ಚಾಮರಾಜನಗರ ಮೊದಲಾದ ಮಾರುಕಟ್ಟೆಗಳಿಂದ ತರಕಾರಿ ಬರುತ್ತಿವೆ. ಸೇವಾರ್ಥದಾರರು ಕೊಡಿಸುವುದರೊಂದಿಗೆ, ಜಾತ್ರೆ ಸಮಿತಿಯಿಂದಲೂ ಖರೀದಿಸಲಾಗುವುದು. ಶ್ರೀಗಳ ಆಶಯದಂತೆ ಲೋಪವಾಗದಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ’ ಎಂದರು.
‘20 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗುತ್ತಿದೆ. ನಿತ್ಯವೂ ಸಿಹಿ ಬಡಿಸಲಾಗುವುದು. ಇದಕ್ಕಾಗಿ 50 ಕ್ವಿಂಟಲ್ ಸಿಹಿಬೂಂದಿ, ತಲಾ ಒಂದು ಲಕ್ಷ ಕೊಬ್ಬರಿ ಮಿಠಾಯಿ, ಲಡ್ಡು, ಬಾದುಶಾ, ಮೈಸೂರು ಪಾಕ್ ಸಿದ್ಧಡಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.