ಸುತ್ತೂರು ಜಾತ್ರೆಯಲ್ಲಿ ನಡೆಯುವ ರಥೋತ್ಸವದ ನೋಟ (ಸಂಗ್ರಹ ಚಿತ್ರ)
ಸುತ್ತೂರು (ಮೈಸೂರು ಜಿಲ್ಲೆ): ಸಾವಿರಾರು ಭಕ್ತರ ಮುಗಿಲು ಮುಟ್ಟುವ ಜಯಘೋಷಗಳೊಂದಿಗೆ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಮಂಗಳವಾರ ಬೆಳಿಗ್ಗೆ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಪ್ರಯುಕ್ತ ನಾಡಿನ ವಿವಿಧೆಡೆಯಿಂದ ಭಕ್ತರು ಗ್ರಾಮದ ಕತೃ ಗದ್ದುಗೆ ಆವರಣದಿಂದ ಮೂಲಮಠದ ರಥ ಸಾಗುವ ಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ರಥಕ್ಕೆ ಹಣ್ಣು–ದವನ ಎಸೆದು ಹರಕೆ ತೀರಿಸಿ ನಮಿಸಿದರು.
ಬೆಳಿಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6 ಗಂಟೆಗೆ ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ಮಾಡಿ, 10.55 ಗಂಟೆಗೆ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಅರ್ಚಕರು ಚಾಮರ ಬೀಸಿ, ಮಂಗಳಾರತಿ ಬೆಳಗಿ ಪೂಜಾ ವಿಧಿ ವಿಧಾನ ಪೂರೈಸಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಲಾರ್ ಶಿವಾನಂದ ಪುಲಿಪ್ಪನಿಬಪಾತಿರಕರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಸಿ.ಎನ್.ಅಶ್ವತ್ಥನಾರಾಯಣ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು. ‘ಹರಹರ ಮಹಾದೇವ’, ‘ಜೈ ಶಿವರಾತ್ರೀಶ್ವರ’ ಘೋಷಣೆ ಮೊಳಗಿಸಿದ ಭಕ್ತರು, ಹೆಬ್ಬಾವಿನ ಗಾತ್ರದ ರಥದ ಮಿಣಿ ಎಳೆದರು.
ಚಿಕ್ಕ ರಥದ ಬದಲು ರೋಬೊ ಆನೆ ‘ಶಿವ’ನ ಮೇಲೆ ಶಿವರಾತ್ರೀಶ್ವರ ಶಿವಯೋಗಿಗಳ ಭಾವಚಿತ್ರವನ್ನು ಇರಿಸಿದ್ದು ಈ ಬಾರಿಯ ವಿಶೇಷ.
10 ನಿಮಿಷ ನಿಂತ ರಥ: ರಾಜಠೀವಿಯಲ್ಲಿ ಪುಷ್ಪಾಲಂಕೃತ ರಥವು ಸಾಗಿತು. ಈ ವೇಳೆ ಭಕ್ತರು ಉತ್ಸಾಹದಲ್ಲಿ ಬಲವಾಗಿ ರಥದ ಮಿಣಿ ಎಳೆಯುತ್ತಿದ್ದರಿಂದ ವಿದ್ಯಾರ್ಥಿನಿಲಯ ಪ್ರವೇಶದ್ವಾರದ ವೃತ್ತದಲ್ಲಿ ಬಲಗಡೆಗೆ ತಿರುಗಬೇಕಿದ್ದ ರಥವು ನೇರವಾಗಿ ಮುಂದೆ ಸಾಗಿ ನಿಂತಿತು. ಕ್ರೇನ್‌ಗೆ ಹಗ್ಗ ಕಟ್ಟಿ ಹಿಮ್ಮುಖವಾಗಿ ಎಳೆದು ರಥವನ್ನು ತಿರುಗಿಸಬೇಕಾಯಿತು. ಅದಕ್ಕೆ 10 ನಿಮಿಷ ಬೇಕಾಯಿತು.
ನಂತರ ಸುತ್ತೂರು ಮೂಲಮಠಕ್ಕೆ ತಲುಪಿ, ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕರ್ತೃ ಗದ್ದುಗೆಗೆ ಮರಳಿತು. ಜಾನಪದ ಕಲಾತಂಡಗಳು ಆಕರ್ಷಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.