ಮೈಸೂರು: ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಿಧನಕ್ಕೆ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ವೆಂಕಟೇಶಮೂರ್ತಿಯವರು ಬೆಂಗಳೂರಿನ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಮೂರು ದಶಕ ಕನ್ನಡ ಅಧ್ಯಾಪಕ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಕವಿ, ನಾಟಕಕಾರ, ಚಿಂತಕರೂ ಆಗಿದ್ದರು. ಸಮಚಿತ್ತದ ವಿಮರ್ಶಕರು, ಉತ್ತಮ ವಾಗ್ಮಿಯೂ ಆಗಿದ್ದರು’ ಎಂದು ನೆನೆದಿದ್ದಾರೆ.
‘ಪರಿವೃತ್ತ’, ‘ಬಾಗಿಲು ಬಡಿದ ಜನಗಳು’ ಮೊದಲಾದ ಕವನಸಂಕಲನಗಳು, ‘ಹೆಜ್ಜೆಗಳು’, ‘ಅಗ್ನಿವರ್ಣ’ ಮೊದಲಾದ ನಾಟಕಗಳನ್ನು ರಚಿಸಿದ್ದರು. ‘ಚಿನ್ನಾರಿ ಮುತ್ತ’, ‘ಅಮೆರಿಕ ಅಮೆರಿಕ’ ಸೇರಿದಂತೆ ಹಲವು ಚಲನಚಿತ್ರಗಳಿಗೆ ಹಾಡು-ಸಂಭಾಷಣೆ ಬರೆದಿದ್ದರು. ಒಳ್ಳೆಯ ಗೀತರಚನಕಾರರೂ ಆಗಿದ್ದರು. ಕಲಬುರಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ‘ಕಥನ ಕವನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು. ಪಿ.ಎಂ. ಇನಾಮದಾರ್ ಸ್ಮಾರಕ ಪ್ರಶಸ್ತಿ, ಧ್ವನಿ ಶ್ರೀರಂಗ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ. ಇಂತಹ ಬಹುಮುಖ ಸಾಧನೆಯ ಸಜ್ಜನ ವ್ಯಕ್ತಿ ನಿಧನ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಕಂಬನಿ ಮಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.