
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 39ನೇ ಪುಣ್ಯಾರಾಧನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಹಾಗೂ ರಾಜೇಂದ್ರ ಶ್ರೀ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಮೊದಲಾದ ವಿಶೇಷ ಪೂಜೆಗಳು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿದವು.
ಮುಂದಿನ ವರ್ಷದ ಜ.15ರಿಂದ 20ರವರೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಮಂಟಪಗಳ ಭೂಮಿಪೂಜೆಯನ್ನೂ ನೆರವೇರಿಸಲಾಯಿತು. ಜಾತ್ರೆಯ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ವಾಟಾಳು, ಹೊಸಮಠ, ಹುಲಿಯೂರುದುರ್ಗ, ಕುದೇರು, ನೀಲಕಂಠಸ್ವಾಮಿಮಠ, ಪಡುಗೂರು, ನಂಜನಗೂಡು, ಹುಲ್ಲಹಳ್ಳಿ, ಆಲಮಟ್ಟಿ, ಮಾದಾಪುರ, ಶಿರಮಹಳ್ಳಿ, ಚಿಲಕವಾಡಿ, ಬೆಟ್ಟದಪುರ, ದಂಡಿಕೆರೆ, ಸಾಲೂರು, ಹಲಗೂರು, ಹರವೆ, ಚಿಕ್ಕತುಪ್ಪೂರು, ಚುಂಚನಹಳ್ಳಿ, ಕುಂದೂರು, ಮುಡಿಗುಂಡ, ದೊಡ್ಡಬಳ್ಳಾಪುರ, ಅರಕೆರೆ, ಮಾದಳ್ಳಿ, ರಾಗಿಬೊಮ್ಮನಹಳ್ಳಿ, ಕಸುವಿನಹಳ್ಳಿ, ಬಸವೇಶ್ವರ ಮಠದ ಶ್ರೀಗಳು, ಮುಖಂಡರು ಪಾಲ್ಗೊಂಡಿದ್ದರು.
ಪ್ರೊ.ಸುಬ್ಬಪ್ಪ ಸ್ವಾಗತಿಸಿದರು. ಸಿ.ವಿ. ಬಸವರಾಜು ವಂದಿಸಿದರು. ಎಚ್.ಎಲ್. ಪ್ರಕಾಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.