ADVERTISEMENT

‘ಯುವ ಸಮೂಹಕ್ಕೆ ಸ್ವದೇಶಿ ಚಿಂತನೆ ಅಗತ್ಯ’: ಸಂಸದ ಯದುವೀರ್ ಒಡೆಯರ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:26 IST
Last Updated 12 ಸೆಪ್ಟೆಂಬರ್ 2025, 5:26 IST
   

ಮೈಸೂರು: ‘ಪ್ರಸ್ತುತ ಸ್ವದೇಶಿ ಆಲೋಚನೆ, ಉತ್ಪಾದನೆ, ಚಿಂತನೆ ಅಗತ್ಯವಾಗಿದ್ದು ಯುವ ಸಮೂಹ ಈ ಕುರಿತು ಗಮನಹರಿಸಬೇಕು’ ಎಂದು ಸಂಸದ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆ ಆವರಣದಲ್ಲಿ ಕಲಿಸು ಫೌಂಡೇಷನ್ ಸಹಯೋಗದೊಂದಿಗೆ ಸಂಸದರ ನಿಧಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಾಂಪೌಂಡ್‌ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದರು.

‘ವಿಕಸಿತ ಭಾರತದ ಕಲ್ಪನೆಯಲ್ಲಿ ಪ್ರಧಾನಿ ಮೋದಿ ಮುಂದುವರೆದಿದ್ದಾರೆ. ಇದರಿಂದ ಭಾರತದ ಭವಿಷ್ಯ ಸುಭದ್ರವಾಗಿದೆ. ಹೀಗಾಗಿ ನಾವೆಲ್ಲರೂ ಅವರೊಂದಿಗೆ ಕೈಜೋಡಿಸುವ ಅವಶ್ಯಕತೆ ಇದೆ. ಭಾರತದ ಆರ್ಥಿಕತೆಯ ಬೆಳವಣಿಗೆಯನ್ನು ವಿಶ್ವವೇ ಗಮನಿಸುತ್ತಿದೆ. ಮೈಸೂರು ಸ್ವಾತಂತ್ರ್ಯ ಪೂರ್ವದಲ್ಲೇ ತನ್ನ ಬ್ರಾಂಡ್‌ ಹೊಂದಿದ್ದು, ಅನೇಕ ವಿಚಾರದಲ್ಲಿ ಗುರುತಿಸಿಕೊಂಡಿದೆ. ಆ ಹೆಸರನ್ನು ಮುಂದುವರೆಸುವ ಜವಾಬ್ದಾರಿ ವಿದ್ಯಾರ್ಥಿಗಳಿಗಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಎನ್ಇಪಿ ಜಾರಿ ಬಗ್ಗೆ ರಾಜ್ಯದಲ್ಲಿ ಗೊಂದಲವಿದೆ. ಈ ಶಿಕ್ಷಣ ವ್ಯವಸ್ಥೆಯಿಂದ ಪಕ್ಷಕ್ಕೆ ಯಾವುದೇ ಲಾಭ ಇಲ್ಲ. ದೇಶದ ಶಿಕ್ಷಣ ಕ್ಷೇತ್ರದ ವರ್ಚಸ್ಸು ಬದಲಾಯಿಸಲು ಸಾಧ್ಯ. ಹೀಗಾಗಿ ಕ್ರಾಂತಿಕಾರಿ ಯೋಜನೆ ಬೆಂಬಲಿಸಬೇಕು ಮತ್ತು ದೇಶದ ವೈವಿಧ್ಯತೆ ಉಳಿಯಲು ಶ್ರಮಿಸಬೇಕು’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ‘ಸರ್ಕಾರಿ ಶಾಲೆ ಮುಚ್ಚುತ್ತಿವೆ. ಸಮಾಜದ ಬೆಳವಣಿಗೆಗೆ ಶಿಕ್ಷಣವೇ ಮೂಲ. ಹೀಗಾಗಿ ಸರ್ಕಾರ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಆದ್ಯತೆ ನೀಡಲಿ’ ಎಂದು ಒತ್ತಾಯಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಕಲಿಸು ಫೌಂಡೇಷನ್‌ ಸಂಸ್ಥಾಪಕ ನಿಖಿಲೇಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ನಿಂಗರಾಜು, ಎಸ್‌ಡಿಎಂಸಿ ಅಧ್ಯಕ್ಷ ನಂಜೇಗೌಡ, ನಾಗಣ್ಣ, ನವೀನ್, ಶಾಲೆ ಪ್ರಭಾರ ಮುಖ್ಯ ಶಿಕ್ಷಕ ವೈ.ಲೋಹಿತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.