ADVERTISEMENT

ಮೈಸೂರು: ಮೃತ, ಗಾಯಾಳು ಹೆಸರು ಅದಲು–ಬದಲು

​ಪ್ರಜಾವಾಣಿ ವಾರ್ತೆ
Published 30 ಮೇ 2023, 17:07 IST
Last Updated 30 ಮೇ 2023, 17:07 IST
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುನೀತ್‌
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುನೀತ್‌   

ಮೈಸೂರು: ತಿ.ನರಸೀಪುರ ಬಳಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡವರ ಹೆಸರನ್ನು ಅಧಿಕಾರಿಗಳು ಅದಲು–ಬದಲು ಮಾಡಿರುವುದರಿಂದ, ಎರಡೂ ಕುಟುಂಬದವರು ಗೊಂದಲಕ್ಕೀಡಾಗಿದ್ದಲ್ಲದೆ, ‌ತೊಂದರೆ ಅನುಭವಿಸುವಂತಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಸಂದೀಪ್‌ (24) ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಧಿಕಾರಿಗಳು ಸೋಮವಾರ ಸುದ್ದಿಗಾರರಿಗೆ ನೀಡಿದ್ದ ಮಾಹಿತಿಯಲ್ಲಿ ಸಂದೀಪ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಅದನ್ನೇ ದಾಖಲೆಗಳಲ್ಲೂ ನಮೂದಿಸಿದ್ದಾರೆ. ವಾಸ್ತವವಾಗಿ ಮೃತಪಟ್ಟಿರುವುದು ಶಿವಕುಮಾರ್‌. ಆದರೆ, ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿತ್ತು.

‘ಪ್ರಜಾವಾಣಿ’ಯನ್ನು ಮಂಗಳವಾರ ಸಂಪರ್ಕಿಸಿದ ಸಂದೀಪ್ ಕುಟುಂಬದವರು, ಸಂದೀಪ್ ಚಿಕಿತ್ಸೆ ಪಡೆಯುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಸಂದೀಪ್‌ ಅವರ ಫೋಟೊ ಕೂಡ ಕಳಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಈ ಮಾಹಿತಿಯೊಂದಿಗೆ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ, ಹೆಸರು ಅದಲು ಬದಲಾಗಿರುವುದು ಖಚಿತಪಟ್ಟಿತು.

‘ಆಸ್ಪತ್ರೆಗೆ ಗಾಯಾಳುವನ್ನು ಕರೆತಂದ‌‌‌‌ 108 ಆ್ಯಂಬುಲೆನ್ಸ್‌ ಸಿಬ್ಬಂದಿ ಕೊಟ್ಟ ಮಾಹಿತಿ ಪ್ರಕಾರ ಶಿವಕುಮಾರ್ ಎಂದು ಗುರುತಿಸಲಾಗಿದೆ. ಅವರ ಕುಟುಂಬಸ್ಥರು ಬಂದು ಮುಖ ಗುರುತಿಸಿದ ಬಳಿಕ ಹೆಸರು ಬದಲಾವಣೆಗಾಗಿ ಅಫಿಡವಿಟ್‌ ಸಲ್ಲಿಸಬೇಕು’ ಎಂದು ವೈದ್ಯರು ತಿಳಿಸಿದ್ದಾರೆ.

’ಸಂದೀಪ್‌ ಬದುಕಿದ್ದಾರೆ ಎಂದು ನಾವೇ ಅಫಿಡವಿಟ್‌ ಸಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಘಾತದ ನೋವಿನೊಂದಿಗೆ ಇಂಥ ಆಘಾತವನ್ನೂ ತಡೆದುಕೊಳ್ಳುವುದು ಹೇಗೆ’ ಎಂದು ಗಾಯಾಳುವಿನ ಸಂಬಂಧಿಕರು ವಿಷಾದ ಮತ್ತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡಿರುವ ಸಂದೀಪ್, ಜನಾರ್ಧನ್, ಭಾನು, ಗೌರವ್ ಹಾಗೂ ಪುನೀತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅಪಘಾತಕ್ಕೆ ಸಂಬಂಧಿಸಿ, ಬಸ್ ಚಾಲಕ ಬಾಗಳಿಯ ದೀಪಕ್ ಅಲಿಯಾಸ್ ದೀಪು ಎಂಬಾತನನ್ನು ಪಟ್ಟಣದ ಪೊಲೀಸರು ಸೋಮವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ತಾಯಿ ಅಕ್ಕನ ಸಾವು

ಮಗು ಅಸಹಾಯಕ ಚೆಲುವಾಂಬ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುನೀತ್‌ (5)ಗೆ ಅಪಘಾತದಲ್ಲಿ ತನ್ನ ತಾಯಿ ಹಾಗೂ ಅಕ್ಕ ಮೃತಪಟ್ಟಿರುವ ಅರಿವಿಲ್ಲ. ತೀವ್ರ ಅಸ್ವಸ್ಥನಾಗಿದ್ದಾನೆ. ತಂದೆ ಖಾನಾವಳಿಗಳಿಗೆ ರೊಟ್ಟಿ ತಯಾರಿಸಿಕೊಡುವ ವೃತ್ತಿಯ ಜನಾರ್ಧನ್ (44) ಕೈಗಳಿಗೆ ಗಾಯವಾಗಿ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪರಸ್ಪರ ನೋಡಲಾಗದ ಸ್ಥಿತಿಯಲ್ಲಿದ್ದಾರೆ.

ಸಂದೀಪ್‌
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದೀಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.