ತಿ.ನರಸೀಪುರ: ಕಸಬಾ ಕೃಷಿ ಪತ್ತಿನ ಸಹಕಾರ ಸಂಘವು ದಶಕದ ಬಳಿಕ ಪ್ರಗತಿಯತ್ತ ಸಾಗಿದ್ದು, ₹8.68 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ ತಿಳಿಸಿದರು
ಪಟ್ಟಣದಲ್ಲಿ ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದಿಂದ ನಷ್ಟದಲ್ಲಿದ್ದ ಸಂಘವನ್ನು ಈಗ ಲಾಭದತ್ತ ಕೊಂಡೊಯ್ಯಲಾಗುತ್ತಿದೆ. ಅಧ್ಯಕ್ಷನಾಗುವ ವೇಳೆ ₹85 ಲಕ್ಷ ಸುಸ್ತಿ ಹಾಗೂ ₹45 ಲಕ್ಷ ನಷ್ಟದಲ್ಲಿತ್ತು. ಸತತ ಪರಿಶ್ರಮದಿಂದ ಸುಸ್ತಿ ಶೂನ್ಯಗೊಳಿಸಿ ಲಾಭಾಂಶದಲ್ಲಿದೆ. ₹ 10 ಲಕ್ಷ ಠೇವಣಿ ಜೊತೆಗೆ 10 ಮಳಿಗೆಯನ್ನೂ ನಿರ್ಮಿಸಲಾಗಿದೆ’ ಎಂದರು.
‘ಷೇರುದಾರರು ಸಹಕಾರ, ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಹಕಾರ ಸಂಘ ಅಭಿವೃದ್ಧಿ ಕಾಣಲು ಸಾಧ್ಯ. ಸಹಕಾರ ಸಂಘದಿಂದ ಕೆಸಿಸಿ ಸಾಲ ಪಡೆದ ಕೆಲ ರೈತರು ಸುಸ್ತಿದಾರರಾಗಿದ್ದು, ಸಾಲ ವಸೂಲಾತಿಗೆ ಜಿಲ್ಲಾ ಬ್ಯಾಂಕ್ ಆದೇಶದ ಮೇರೆಗೆ ವಕೀಲರಿಂದ ನೋಟಿಸ್ ನೀಡಬೇಕಾಗಿದೆ. ರೈತರು ಕೂಡಲೇ ಮರುಪಾವತಿಸಿ’ ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಟಿ.ಸಿ.ಫಣೀಶ್ ಕುಮಾರ್, ನಿರ್ದೇಶಕರಾದ ಎಂ.ನಾಗರತ್ನ, ಎನ್.ಶೇಖರ್, ಮಹಾಲಿಂಗಪ್ಪ, ನಾಗಮ್ಮ, ಬಿ.ಸುಂದರಸ್ವಾಮಿ, ಬಸವರಾಜು, ಎಂ.ಮಹದೇವಯ್ಯ, ಬಿ.ಎಂ.ಮಹದೇವ ಸ್ವಾಮಿ, ಬಿ.ರಾಘವೇಂದ್ರ, ಪ್ರಕಾಶ್ ಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ಎಸ್.ಶೇಖರ್, ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಎಂ.ಶಿವಕುಮಾರ್, ದಿವ್ಯಶ್ರೀ, ಸುಮಿತ್ರ, ಎನ್.ಲೋಕೇಶ್, ಫ್ಯಾನ್ಸಿ ಮೋಹನ್, ಸಿ.ಮಹದೇವು, ತಿರುಮಕೂಡಲು ಲಕ್ಷ್ಮಣ್, ಟಿ.ಎಂ.ನಾಗಣ್ಣ, ಸಾಲೂರು ಸ್ವಾಮಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ರಘುನಂದನ್, ಷೇರುದಾರರು, ಸದಸ್ಯರು ಭಾಗವಹಿಸಿದ್ದರು.
‘ಸುವರ್ಣ ಸಂಭ್ರಮಕ್ಕೆ ಸಿದ್ಧತೆ’
ಸಂಘದಲ್ಲಿ 'ಎ' ತರಗತಿಯ 1346 ಮಂದಿ ಷೇರುದಾರರಿದ್ದು₹ 8216416 ಲಕ್ಷ ಷೇರು ಬಂಡವಾಳವಿದೆ. ರೈತರಿಗೆ ಕೆಸಿಸಿ ಕಬ್ಬು ಬೆಳೆ ಸಾಲವಾಗಿ 530 ಮಂದಿಗೆ ₹56697000 ವಿತರಿಸಲಾಗಿದೆ ಎಂದರು. ಮುಂದಿನ ಆರ್ಥಿಕ ವರ್ಷದಲ್ಲಿ ₹15 ಕೋಟಿ ಕೆಸಿಸಿ ಸಾಲ ವಿತರಣೆ ಮಾಡುವ ಗುರಿ ಇದೆ. ಸದಸ್ಯರ ಸಹಕಾರ ಅಗತ್ಯ. ಮಹಿಳಾ ಸಂಘಗಳಿಗೂ ₹5 ಕೋಟಿ ಸಾಲ ಸಂಘದ ಖಾಲಿ ಜಾಗದಲ್ಲಿ ಗೋದಾಮು ನಿರ್ಮಾಣ ಮಾಡಲು ಆಡಳಿತ ಮಂಡಳಿಯಲ್ಲಿ ಚರ್ಚಿಲಾಗುವುದು’ ಎಂದು ಅವರು ತಿಳಿಸಿದರು.
‘ಸಂಘ ಸ್ಥಾಪಿತವಾಗಿ ಮುಂದಿನ ಆರ್ಥಿಕ ವರ್ಷಕ್ಕೆ 50 ವರ್ಷ ಪೂರೈಸುತ್ತಿದ್ದು ಹಿರಿಯ ರೈತ ಮುಖಂಡರಿಗೆ ಸನ್ಮಾನ ಷೇರುದಾರರ ಮತ್ತು ಸದಸ್ಯರ ಶೈಕ್ಷಣಿಕ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತದೆ ಎಂದು ಡಣಾಯಕನಪುರ ಮಲ್ಲಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.