ಮೈಸೂರು: ಧರ್ಮಸ್ಥಳ ಹಾಗೂ ಜೈನ ಧರ್ಮದ ಬಗ್ಗೆ ಅಪಪ್ರಚಾರ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಿಗಂಬರ ಜೈನ ಸಮುದಾಯ ಗಾಂಧಿ ವೃತ್ತದ ಬಳಿ ಮೌನ ಪ್ರತಿಭಟನೆ ನಡೆಸಿತು.
‘ಧರ್ಮವನ್ನು ಉಳಿಸಿ’, ‘ಶ್ರೀ ಕ್ಷೇತ್ರಕ್ಕೆ ಜಯವಾಗಲಿ’, ‘ಧರ್ಮ ವಿರೋಧಿಗಳ ವಿರುದ್ಧ ಕ್ರಮವಹಿಸಿ’, ‘ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಬೇಡ’ ‘ಅಲ್ಪಸಂಖ್ಯಾತ ಜೈನ ಧರ್ಮ ಉಳಿಸಿ, ಬೆಳೆಸಿ’, ‘ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿ’ ಇತ್ಯಾದಿ ಘೋಷಣಾ ಫಲಕ ಪ್ರದರ್ಶಿಸಿದರು.
108 ಆಚಾರ್ಯ ಪುಣ್ಯ ಸಾಗರ ಮುನಿ ಮಾತನಾಡಿ, ‘ಧರ್ಮ ಇಲ್ಲದೆ ಭಾರತ ಊಹಿಸಲು ಅಸಾಧ್ಯ. ಆದರೆ ಸುಳ್ಳು ಆರೋಪದಿಂದ ಅದಕ್ಕೆ ಹಾನಿಯಾಗುತ್ತದೆ. ರಾಗ, ದ್ವೇಷಗಳಿದ್ದಾಗ ಪ್ರತಿಭಟನೆಗಳಾಗುತ್ತವೆ. ಧರ್ಮಸ್ಥಳ ಪ್ರಾಚೀನ ಮಂದಿರ. ಮತ್ತೊಬ್ಬರ ಮೇಲೆ ಆರೋಪ ಹೊರಿಸುವುದು ಪಾಪ ಕಾರ್ಯ, ಹೀಗಾಗಿ ಸುಳ್ಳು ಆರೋಪ ಮಾಡದೆ ಸತ್ಯಮಾರ್ಗದಿಂದ ನಡೆಯಿರಿ’ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಎಂ.ಎನ್.ಸುನೀಲ್ ಕುಮಾರ್ ಮಾತನಾಡಿ, ‘ಕೆಲವು ಯೂಟ್ಯೂಬರ್‌ಗಳು ಹಾಗೂ ಕಿಡಿಗೇಡಿಗಳು ಅನಾವಶ್ಯವಾಗಿ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಮನೆತನಕ್ಕೆ ಮಸಿ ಬಳಿಯಲು ಪ್ರಯತ್ನವಾಗುತ್ತಿದೆ. ಇದು ಜೈನ ಸಮುದಾಯಕ್ಕೆ ನೋವುಂಟು ಮಾಡಿದೆ. ಈ ರೀತಿ ಅಪಪ್ರಚಾರ ಮಾಡುವವರ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಹರೀಶ್ ಹೆಗ್ಡೆ, ಸುಮಾ ದಯಾಕರ್, ಲಕ್ಷ್ಮೀಶ್ ಬಾಬು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.