ಮೈಸೂರು: ‘ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ತಯಾರು ಮಾಡುವ ಹೊಣೆ ಅವರದ್ದಾಗಿದೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿ ದೂರ ಮಾಡಿಸುವ ಜವಾಬ್ದಾರಿ ಜೊತೆಗೆ ಪ್ರತಿಭಾವಂತ ಮಕ್ಕಳನ್ನು ತಯಾರು ಮಾಡಬೇಕು’ ಎಂದು ಸಲಹೆ ನೀಡಿದರು.
‘ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚು ಬರುತ್ತಿದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅಂತಹವರನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆ ಸೌಲಭ್ಯ ಒದಗಿಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ಅನೇಕ ದಾನಿಗಳು, ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಸ್ಮಾರ್ಟ್ ಕ್ಲಾಸ್ ಕೊಠಡಿ ನಿರ್ಮಿಸಿಕೊಟ್ಟಿರುವುದು ಸಂತಸದ ವಿಷಯ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಲ್ಲೂಕು ಪಂಚಾಯಿತಿ ಇಒ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಇದ್ದರು.
‘ಭ್ರಷ್ಟಾಚಾರರಹಿತ ಕ್ಷೇತ್ರ’
‘ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಭ್ರಷ್ಟಾಚಾರ ಇಲ್ಲದೆ ನಡೆಯುತ್ತಿರುವ ಕ್ಷೇತ್ರ ಇದ್ದರೆ ಅದು ಶಿಕ್ಷಕರ ಕ್ಷೇತ್ರ. ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದಾದರೇ ಅದು ಶಿಕ್ಷಕರು ಮಾತ್ರ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.