ಮೈಸೂರಿನಲ್ಲಿ ನಡೆದ ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್‌ನ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜೈನ್ ಪ್ರಮಾಣ ವಚನ ಬೋಧಿಸಿದರು
ಮೈಸೂರು: ‘ಪ್ರಾಚೀನ ದೇವಾಲಯಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ ದೇಶದಾದ್ಯಂತ ಸಂಸ್ಥೆಯ ಶಾಖೆಗಳನ್ನು ಸ್ಥಾಪಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅಭಿವೃದ್ಧಿ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜೈನ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಟ್ರಸ್ಟ್ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿ, ‘2022ರಲ್ಲಿ ಟ್ರಸ್ಟ್ ಸ್ಥಾಪನೆಯಾಗಿದ್ದು, ದೇಗುಲಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು 10 ದೇವಾಲಯಗಳನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.
‘ಬಿಳಿಕೆರೆಯ ಲಕ್ಷ್ಮಿಕಾಂತ ದೇವಾಲಯ, ಮಂಡ್ಯದ ಮೇಲುಕೋಟೆ ತೊಣ್ಣೂರು ಕೆರೆಯಲ್ಲಿನ ವೆಂಕಟೇಶ್ವರ, ಹನೂರಿನ ಮಾರಮ್ಮ, ಚಾಮರಾಜನಗರದ ಭುಜಂಗೇಶ್ವರ, ತಲಕಾಡಿನ ವೈಕುಂಠ ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯ ಮುಳಬಾಗಿಲಿನ ವಿರೂಪಾಕ್ಷ, ಉಡುಪಿಯ ಭ್ರಮಲಿಂಗೇಶ್ವರ, ಪಾಂಡುರಂಗ, ಬೋಗಾದಿ ರಸ್ತೆಯ ಕುಮಾರಬೀಡು ಗ್ರಾಮದ ಜೈನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಪಟ್ಟಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಬಿಳಿಕೆರೆ ಹಾಗೂ ಕುಮಾರಬೀಡು ದೇಗುಲಗಳ ಜೀರ್ಣೋದ್ಧಾರಕ್ಕೆ ಸಲಹೆ ನೀಡಿದ್ದರು. ದಾನಿಗಳ ನೆರವಿನಿಂದಲೇ ಅಭಿವೃದ್ಧಿ ಮಾಡಲಾಗುವುದು’ ಎಂದರು.
‘1947ರಲ್ಲಿ ದೇಶದಲ್ಲಿ ಸಾವಿರಾರು ವರ್ಷ ಇತಿಹಾಸದ ದೇವಾಲಯಗಳಿದ್ದವು. 17.5 ಲಕ್ಷದಷ್ಟಿದ್ದ ಹಿಂದೂ ದೇಗುಲಗಳು ನಿರ್ಲಕ್ಷ್ಯದಿಂದಾಗಿ 7 ಲಕ್ಷ ಮಾತ್ರ ಇವೆ. ದೇವಾಲಯಗಳ ಉಳಿವು ತುರ್ತಾಗಿದ್ದು, ಕಂಪನಿಗಳ ಸಿಎಸ್‌ಆರ್ ನಿಧಿ ಹಾಗೂ ದಾನಿಗಳ ನೆರವು ಪಡೆಯಲಾಗುತ್ತಿದೆ’ ಎಂದರು.
ಟ್ರಸ್ಟ್ ಜಿಲ್ಲಾಧ್ಯಕ್ಷರಾಗಿ ಡಿ.ರಾಜೇಶ್, ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಅನಿಲ್ ಜೈನ್, ಖಜಾಂಚಿ ಚೈತನ್ಯ ಕುಮಾರ್, ಜಂಟಿ ಖಜಾಂಚಿ ಮರಿಸ್ವಾಮಿ ನಾಯಕ್, ಜಂಟಿ ಕಾರ್ಯದರ್ಶಿ ಮರಿಗೌಡ, ಪದಾಧಿಕಾರಿಗಳಾಗಿ ಬಾಲರಾಜ್, ಪುಟ್ಟರಾಜು, ಜಯಪ್ರಕಾಶ್, ಕೇಶವ, ಪ್ರಕಾಶ್, ದೇವರಾಜ್, ಮಂಜುನಾಥ್, ಕಾಂತರಾಜ್ ಪ್ರಮಾಣ ಸ್ವೀಕರಿಸಿದರು.
ರಾಜ್ಯಾಧ್ಯಕ್ಷ ಪ್ರಥ್ವಿರಾಜ್ ಜೈನ್, ರಾಜ್ಯ ಖಜಾಂಚಿ ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.