ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ‘ಎನ್‌ಎಸ್‌ಜಿ’ ತಾಲೀಮು

ನಗರ ಪೊಲೀಸರು, ಆಂತರಿಕ ಭದ್ರತಾ ವಿಭಾಗ, ಕಮಾಂಡೊ ಪಡೆಗಳಿಂದ ಜಂಟಿ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 13:34 IST
Last Updated 21 ಜನವರಿ 2020, 13:34 IST
ಮೈಸೂರಿನ ಅರಮನೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರು ಸೋಮವಾರ ಉಗ್ರರ ದಾಳಿ ಕುರಿತು ಅಣಕು ಕಾರ್ಯಚರಣೆ ನಡೆಸಿದರು
ಮೈಸೂರಿನ ಅರಮನೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರು ಸೋಮವಾರ ಉಗ್ರರ ದಾಳಿ ಕುರಿತು ಅಣಕು ಕಾರ್ಯಚರಣೆ ನಡೆಸಿದರು   

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಉಗ್ರರ ದಾಳಿ ಸಂಭವಿಸಿದರೆ ಅದನ್ನು ಎದುರಿಸುವ ಕುರಿತು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಸೋಮವಾರವೂ ನಗರದಲ್ಲಿ ಬಿರುಸಿನ ತಾಲೀಮು ನಡೆಸಿತು.

ಭಾನುವಾರವಷ್ಟೇ ‘ವಿಪ್ರೊ’ದಲ್ಲಿ ಅಭ್ಯಾಸ ನಡೆಸಿದ್ದ ಪಡೆಯ ಯೋಧರು, ಸೋಮವಾರ ‘ಇನ್‌ಫೋಸಿಸ್‌’ ಹಾಗೂ ಅರಮನೆಯಲ್ಲಿ ನಗರ ಪೊಲೀಸರು, ಕಮಾಂಡೊ ಪಡೆ, ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ಜತೆ ಸತತ ಅಭ್ಯಾಸ ನಡೆಸಿದರು.

ಒಂದು ವೇಳೆ ಭಯೋತ್ಪಾದಕರ ದಾಳಿ ನಡೆದರೆ ಚೆನ್ನೈನಿಂದ ಬರಲು ತಗಲುವ ಸಮಯ, ಅಲ್ಲಿಯವರೆಗೆ ಇಲ್ಲಿನ ಪೊಲೀಸರು ಮಾಡಬೇಕಾದ ಕೆಲಸ, ಬಂದ ನಂತರ ಯಾವ ರೀತಿ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು ಎಂಬೆಲ್ಲ ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡರು.

ADVERTISEMENT

ಉಗ್ರರ ದಾಳಿಗೆ ಒಳಗಾದ ಪ್ರದೇಶವನ್ನು ತಲುಪುವ ಸ್ಥಳ, ಸಂಚಾರವನ್ನು ನಿಯಂತ್ರಿಸುವ ಪರಿ, ಸಾರ್ವಜನಿಕರನ್ನು ಸುರಕ್ಷಿತವಾಗಿಡಲು ಮಾಡಬೇಕಾದ ಮಾರ್ಗೋಪಾಯಗಳ ಕುರಿತು ಅವರು ರೂಪರೇಷೆ ರೂಪಿಸಿದರು.

ಪೊಲೀಸರೇ ಸಾರ್ವಜನಿಕರಾಗಿ, ಪೊಲೀಸರೇ ದಾಳಿಕೋರರಾಗಿ, ಎನ್‌ಎಸ್‌ಜಿ ಕಮಾಂಡೊಗಳು ರಕ್ಷಕರಾಗಿ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಹೀಗಾಗಿ, ಸಾರ್ವಜನಿಕರಿಗೆ ಮಧ್ಯಾಹ್ನದ ನಂತರ ಅರಮನೆಗೆ ಪ್ರವೇಶಾವಕಾಶ ನೀಡಲಿಲ್ಲ.‌

ಹೆಲಿಕಾಪ್ಟರ್‌ನಿಂದ ಕೆಳಗಿಳಿಯುವ ಸಾಹಸ, ಕಾಂಪೌಂಡ್ ಏರಿ ಜಿಗಿಯುವುದು, ಬಂದೂಕು ಹಿಡಿದು ಓಡುವುದು, ದಾಳಿಕೋರರನ್ನು ಅಟ್ಟಾಡಿಸುವುದು... ಹೀಗೇ ನಾನಾ ಬಗೆಯ ಸಾಹಸಗಳನ್ನು ನಡೆಸಲಾಯಿತು.

ಕೆಲವೊಂದು ಕಡೆ ನಕಲಿ ಗುಂಡುಗಳನ್ನೂ ಹಾರಿಸಲಾಯಿತು. ‘ಎನ್‌ಎಸ್‌ಜಿ’ ವಾಹನಗಳು, ನೂರಾರು ಭದ್ರತಾ ಪಡೆಗಳನ್ನು ನೋಡಿದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದು ನಿಜ. ಇದೊಂದು ಅಣಕು ಕಾರ್ಯಾಚರಣೆ ಎಂದು ಹೇಳಿ ಸಾರ್ವಜನಿಕರನ್ನು ಸ್ಥಳದಿಂದ ತೆರವುಗೊಳಿಲಾಯಿತು.

‘ಇದೊಂದು ಸಾಮಾನ್ಯ ಪ್ರಕ್ರಿಯೆ. ಉಗ್ರರ ಸಂಭಾ‌ವ್ಯ ದಾಳಿ ಎದುರಿಸಲು ಒಂದು ತಾಲೀಮು. ಪ್ರತಿ ವರ್ಷ ಇದನ್ನು ನಡೆಸಲಾಗುತ್ತದೆ. ಇದಕ್ಕೂ ಮಂಗಳೂರಿನಲ್ಲಿ ಸಜೀವ ಬಾಂಬ್ ಸಿಕ್ಕಿದ್ದಕ್ಕೂ, ಗಣರಾಜ್ಯೋತ್ಸವಕ್ಕೂ ಯಾವುದೇ ಸಂಬಂಧ ಇಲ್ಲ. ಜನರು ಗೊಂದಲ ಹಾಗೂ ಆತಂಕಕ್ಕೆ ಒಳಗಾಗಬಾರದು’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.