ADVERTISEMENT

ಮೈಸೂರು: ವಿದ್ಯಾಧೀಶತೀರ್ಥರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 10:03 IST
Last Updated 10 ಜುಲೈ 2022, 10:03 IST
ಆಷಾಢದ ಪ್ರಥಮ ಏಕಾದಶಿ ಅಂಗವಾಗಿ ಸರಸ್ವತಿಪುರಂ ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರ ಸ್ವಾಮೀಜಿ ಭಕ್ತರಿಗೆ ಭಾನುವಾರ ತಪ್ತಮುದ್ರಾಧಾರಣೆ ಮಾಡಿದರು/ ಪ್ರಜಾವಾಣಿ ಚಿತ್ರ
ಆಷಾಢದ ಪ್ರಥಮ ಏಕಾದಶಿ ಅಂಗವಾಗಿ ಸರಸ್ವತಿಪುರಂ ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರ ಸ್ವಾಮೀಜಿ ಭಕ್ತರಿಗೆ ಭಾನುವಾರ ತಪ್ತಮುದ್ರಾಧಾರಣೆ ಮಾಡಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ಆಷಾಢದ ಪ್ರಥಮ ಏಕಾದಶಿ ಅಂಗವಾಗಿ ನಗರದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ‘ತಪ್ತ ಮುದ್ರಾಧಾರಣೆ’ ಕಾರ್ಯಕ್ರಮ ಭಾನುವಾರ ನಡೆಯಿತು.

ಶ್ರೀಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಉಡುಪಿಯ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರ ಸ್ವಾಮೀಜಿ ಭಕ್ತರಿಗೆ ಶಂಖ ಚಕ್ರಗಳ ಮುದ್ರಾಧಾರಣೆ ನೆರವೇರಿಸಿದರು.

ನಂತರ ಮಾತನಾಡಿದ ವಿದ್ಯಾಧೀಶತೀರ್ಥ ಸ್ವಾಮೀಜಿ, ‘ಆಷಾಢದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಉತ್ಥಾನದ್ವಾದಶಿಯವರೆಗೆ ನಾರಾಯಣನು ಯೋಗ ನಿದ್ರೆಯಲ್ಲಿ ತೊಡಗುತ್ತಾನೆ ಎನ್ನುವ ನಂಬಿಕೆ ಇದೆ. ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿಕೀಟಗಳಿಂದ ಎದುರಾಗುವ ಸಾಂಕ್ರಾಮಿಕ ರೋಗ–ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ತಪ್ತಮುದ್ರಾಧಾರಣೆ ಪೂರಕವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಚಾತುರ್ಮಾಸ್ಯ ಕೂರುವ ಮುನ್ನ ಗೃಹಸ್ಥರು ಹಾಗೂ ಯತಿಗಳು ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಅನಾನುಕೂಲವಾದವರು ಏಕಾದಶಿ ದಿನದ ಹೊರತಾಗಿಯೂ ಮುದ್ರಾ ಧಾರಣೆ ಮಾಡಿಸಿಕೊಳ್ಳಬಹುದು’ ಎಂದು ಹೇಳಿದರು.

ಶ್ರೀಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ, ‘ಶ್ರೀಕೃಷ್ಣಧಾಮಕ್ಕೆ ಬಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ತೋಳಿಗೆ, ಎದೆಯ ಭಾಗಕ್ಕೆ ಹಾಗೂ ಹೊಟ್ಟೆಯ ಮೇಲೆ ಶಂಖ ಮತ್ತು ಚಕ್ರದ ಮುದ್ರೆ ಹಾಕಿಸಿಕೊಂಡರು’ ಎಂದು ತಿಳಿಸಿದರು.

‘ಪ್ರತಿ ವರ್ಷವೂ ಈ ಸಂದರ್ಭದಲ್ಲಿ ನಾನಾ ಕಡೆಗಳಿಂದ ಭಕ್ತರು ಬಂದು ತಪ್ತ ಮುದ್ರೆಯನ್ನು ಹಾಕಿಸಿಕೊಳ್ಳುತ್ತಾರೆ. ಸುದರ್ಶನ ಹೋಮ ನೆರವೇರಿಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆಯ ಭಾಗ, ಎಡ ಮತ್ತು ಬಲ ತೋಳಿಗೆ ಮುದ್ರೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ’ ಎಂದರು.

ಮುಖಂಡರಾದ ಶ್ರೀವತ್ಸ, ರವಿಶಾಸ್ತ್ರಿ, ಪುಟ್ಟಣ್ಣ ಭಟ್, ಸುಧೀರ್ ಆಚಾರ್, ಗಿರೀಶ್ ಹೆಬ್ಬಾರ್, ಪ್ರೀತಂ ಪುರಾಣಿಕ್, ವಿಕ್ರಂ ಅಯ್ಯಂಗಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.