ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗ್ರಾಮದ ಸರಹದ್ದಿನಲ್ಲಿರುವ ‘ಕೆಂಪೇಗೌಡನ ಕಟ್ಟೆ’ ಪುನರುಜ್ಜೀವನ ಕಂಡರೂ, ಮತ್ತೆ ಅವಗಣನೆಗೆ ಒಳಗಾಗಿದೆ.
ಕಟ್ಟೆಯ ಮೇಲ್ಭಾಗದಲ್ಲಿರುವ ತಿಪ್ಪಯ್ಯನಕೆರೆಯ ಕೋಡಿ ಬಿದ್ದರೆ ಈ ಕಟ್ಟೆಯ ಒಡಲು ತುಂಬುತ್ತಿತ್ತು. ಆದರೆ, ಅದು ಚರಂಡಿ ನೀರಿನ ತೊಟ್ಟಿಯಾಗಿದೆ. ಕೋಡಿ ನೀರು ಹರಿಯುವ ಜಾಗವನ್ನು ರಸ್ತೆ ಮಾಡಲಾಗಿದೆ. ಬೆಟ್ಟದಿಂದ ಹರಿದು ಬರುವ ತೊರೆಯ ಹರಿವು ಬದಲಾಗಿದೆ. ರಿಂಗ್ ರಸ್ತೆ ಇಕ್ಕೆಲದಲ್ಲಿ ಹಳ್ಳ ರಚನೆಯಾಗಿದ್ದು, ಹಡಜನ ಗ್ರಾಮದ ಕೆರೆಯತ್ತ ಹರಿಯುತ್ತಿದೆ.
ರಾಜಕಾಲುವೆ ಇಲ್ಲವೇ, ಕೆರೆಗಳ ಜಾಲದಿಂದ ಬೇರ್ಪಡಿಸಿದರೆ ಆಗುವ ಪರಿಣಾಮಕ್ಕೆ ಸಾಕ್ಷಿಯಾಗಿ ಕಟ್ಟೆಯು ನಿಂತಿದೆ. ಇದರ ಎದುರಿನಲ್ಲಿನ ರಸ್ತೆ ಹಾಗೂ ಕಟ್ಟೆಯ ಏರಿಗೆ ಹೊಂದಿಕೊಂಡಂತೆ ರಿಯಲ್ ಎಸ್ಟೇಟ್‌ನವರು, ಕಲ್ಲು, ಜಲ್ಲಿ, ಸಿಮೆಂಟ್ ಮಾರುವವರು ಶೆಡ್ ನಿರ್ಮಿಸಿಕೊಂಡಿದ್ದು, ಕಟ್ಟೆಯ ಉಸಿರು ಕಟ್ಟಿಸುವಂತಿದೆ.
‘ಲಲಿತಾದ್ರಿಪುರ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಮಾದರಿ ಗ್ರಾಮ. ಅವರ ದೂರದೃಷ್ಟಿಯ ಕಾರ್ಯಗಳಿಗೆ ಗ್ರಾಮವು ಹೆಗ್ಗುರುತಾಗಿದೆ. ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ 2 ಕೆರೆ, 4 ಕಟ್ಟೆಗಳು ಗ್ರಾಮಕ್ಕೆ ನೀರು ಪೂರೈಸುತ್ತಿದ್ದವು. ಈಗ ಎಲ್ಲವೂ ನಾಶವಾಗುತ್ತಿವೆ’ ಎನ್ನುತ್ತಾರೆ ಗ್ರಾಮದ ನಂಜಪ್ಪ.
ಒಂದುಕಾಲದಲ್ಲಿ ಜನ– ಜಾನುವಾರು ಕುಡಿಯುವ ನೀರಿನ ಮೂಲವಾಗಿದ್ದ ಕಟ್ಟೆಯು ಮಳೆ ನೀರನ್ನು ಇಂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೇಸಿಗೆಯಲ್ಲೂ ನೀರಿರುವ ಕಟ್ಟೆಯೆಂದು ದಶಕದ ಹಿಂದೆ ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್‌ಐ) ತಯಾರಿಸಿರುವ ವರದಿಯಲ್ಲಿ (ಮೈಸೂರು-ನಂಜನಗೂಡು ಯೋಜನಾ ಪ್ರದೇಶದಲ್ಲಿ ಜಲಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರ್ಯತಂತ್ರ) ಗುರುತಿಸಿತ್ತು.
ಲಲಿತಾದ್ರಿಪುರ ಸರ್ವೆ ಸಂಖ್ಯೆ 69ರಲ್ಲಿರುವ ಕಟ್ಟೆಯ ವಿಸ್ತೀರ್ಣ 2.08 ಎಕರೆಯಾಗಿದ್ದು, ರಿಂಗ್ ರಸ್ತೆ, ಬಡಾವಣೆಗಳಿಗೆ ಹೊಂದಿಕೊಂಡಿದೆ. ಕಟ್ಟೆಯ ಉತ್ತರ ಭಾಗದಲ್ಲಿ ಜಾನುವಾರುಗಳಿಗೆ ದಶಕಗಳ ಹಿಂದೆ ಕೊರೆಯಲಾದ ಕೊಳವೆ ಬಾವಿ ಈಗಲೂ ಇದೆ. ಇದರ ಪಕ್ಕದಲ್ಲಿನ ಅರಳೀಮರಕ್ಕೆ ಕಟ್ಟೆಯನ್ನು ಕಟ್ಟಲಾಗಿದ್ದು, ಶ್ರದ್ಧಾಕೇಂದ್ರವಾಗಿ ಬದಲಾಗಿದೆ. ಇದರ ಪಕ್ಕದಲ್ಲಿ ಕಟ್ಟಡ ತ್ಯಾಜ್ಯ ಸರಿಯುವುದು ನಡೆದಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಕಟ್ಟೆಯ ಪುನರುಜ್ಜೀವನಕ್ಕೆ ನೆರವು ನೀಡಿತ್ತು. ಭಾರತೀಯ ಕೈಗಾರಿಕೆಗಳ ಒಕ್ಕೂಟ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಚಾಲನೆ ನೀಡಿತ್ತು. ಮೈಕ್ಯಾಪ್ಸ್ ಕಾಮಗಾರಿ ಕೈಗೆತ್ತಿಕೊಂಡು ಜಾರಿದ್ದ ಕಟ್ಟೆಯ ಬದುಗಳನ್ನು ದುರಸ್ತಿಗೊಳಿಸಿತ್ತು. 2019ರ ಫೆ.8ರಂದು ಉದ್ಘಾಟನೆಯಾಗಿತ್ತು. ಕಟ್ಟೆಯ ಒಳಗೆ ಕಟ್ಟಡ ತ್ಯಾಜ್ಯ ಸುರಿಯದಂತೆ ಕಬ್ಬಿಣದ ಬೇಲಿ ಹಾಕಲಾಗಿದ್ದು, ಅದರಿಂದ ಸ್ವಲ್ಪ ರಕ್ಷಣೆಯೂ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.