ADVERTISEMENT

ತಿರುಗಾಟದ ಅನುಭವ ಅಳೆಯಲಾಗದು: ವಿಶ್ವನಾಥ್‌ ಸುವರ್ಣ

ವಿಶ್ವನಾಥ್‌ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:26 IST
Last Updated 16 ಆಗಸ್ಟ್ 2022, 15:26 IST
ಮೈಸೂರಿನಲ್ಲಿ ಮಂಗಳವಾರ ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಕೃತಿಯನ್ನು ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಎಸ್.ಆರ್.ಮಧುಸೂದನ, ಮಡ್ಡೀಕೆರೆ ಗೋಪಾಲ್, ಮೋಹನ್‌ ಕುಮಾರ್‌ ಗೌಡ, ಕೃಪಾಕರ್, ಡಾ.ಸಂತೃಪ್ತ್‌, ಕಲ್ಗುಂಡಿ ನವೀನ್‌ ಇದ್ದರು
ಮೈಸೂರಿನಲ್ಲಿ ಮಂಗಳವಾರ ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಕೃತಿಯನ್ನು ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಎಸ್.ಆರ್.ಮಧುಸೂದನ, ಮಡ್ಡೀಕೆರೆ ಗೋಪಾಲ್, ಮೋಹನ್‌ ಕುಮಾರ್‌ ಗೌಡ, ಕೃಪಾಕರ್, ಡಾ.ಸಂತೃಪ್ತ್‌, ಕಲ್ಗುಂಡಿ ನವೀನ್‌ ಇದ್ದರು   

ಮೈಸೂರು: ‘ಪ್ರಯಾಣ, ಸುತ್ತಾಟಗಳು ನೀಡಿದ ಅನುಭವಗಳನ್ನು ಹಣದಲ್ಲಿ ಅಳೆಯಲಾಗದು. ವಯಸ್ಸಾಗಿ ಮನೆಯಲ್ಲಿ ಕುಳಿತಾಗ ನೆನಪುಗಳು ಜೀವನೋತ್ಸಾಹ ಹೆಚ್ಚಿಸುತ್ತವೆ’ ಎಂದು ವನ್ಯಜೀವಿ ಛಾಯಾಚಿತ್ರಕಾರ ಕೃಪಾಕರ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿ, ‘ಮನುಷ್ಯ ಇಷ್ಟವಾದದ್ದನ್ನು ಮಾಡಬೇಕು. ಅದೇ ಜೀವನವಾಗಬೇಕು. ಇಷ್ಟದ ಕೆಲಸಗಳನ್ನು ಮಾಡುವಾಗ ಸಿಗುವ ಅನುಭವಗಳು ಜೀವನವನ್ನು ಕಾಯುತ್ತವೆ’ ಎಂದರು.

‘ಬೆಂಗಳೂರಿನ ಅನುಕೂಲಸ್ಥರೊಬ್ಬರು ನನ್ನ ಬಳಿ ಬಂದು ಚೆನ್ನಾಗಿ ದುಡಿದು ಫಾರಂ ಹೌಸ್‌ ಮಾಡಿದ್ದೇನೆ. ವನ್ಯಜೀವಿಗಳ ಛಾಯಾಚಿತ್ರ ತೆಗೆಯಲು ಕಾಡಿಗೆ ಬರುತ್ತೇನೆ ಎಂದಿದ್ದರು. ಇನ್ನೊಬ್ಬ ಬ್ರಿಟನ್‌ ಸ್ನೇಹಿತ ಕ್ರಿಸ್‌ ದೇವಾನೆ ಮನೆಯ ಸಾಮಾನುಗಳನ್ನು ಮಾರಿ ಚಿಕ್ಕ ಕ್ಯಾಮೆರಾ ಖರೀದಿಸಿದ್ದ. ಈಗ ಬೆಂಗಳೂರಿನ ಆ ವ್ಯಕ್ತಿ ಕ್ಯಾಮೆರಾಗಳನ್ನು ಬಾಡಿಗೆ ಕೊಡುತ್ತಿದ್ದಾರೆ. ಕ್ರಿಸ್‌ ಬಿಬಿಸಿ ಚಾನೆಲ್‌ನ ಹೆಸರಾಂತ ಛಾಯಾಗ್ರಾಹಕರಾಗಿದ್ದಾರೆ’ ಎಂದು ಉದಾಹರಿಸಿದರು.

ADVERTISEMENT

‘ಇಷ್ಟಪಟ್ಟ ದಾರಿಯಲ್ಲಿ ಹೋಗದೇ ಇದ್ದರೆ, ಸರಳತೆ ಇಲ್ಲದಿದ್ದರೆ, ನಾವಂದುಕೊಂಡ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲ. ಛಾಯಾಗ್ರಾಹಕರಾದ ನೇತ್ರರಾಜು, ವಿಶ್ವನಾಥ್‌ ಸುವರ್ಣ ಇಷ್ಟದ ಕೆಲಸವನ್ನು ಸುಂದರವಾಗಿ ಮಾಡಿದವರು. ಸರಳವಾಗಿ ಬದುಕಿದವರು’ ಎಂದು ಶ್ಲಾಘಿಸಿದರು.

ಪುಸ್ತಕದ ಪಠ್ಯ ಲೇಖಕ ಕಲ್ಗುಂಡಿ ನವೀನ್‌ ಮಾತನಾಡಿ, ‘10ನೇ ತರಗತಿವರೆಗಿನ‍ಪಠ್ಯಪುಸ್ತಕಗಳಲ್ಲಿ ವನ್ಯಜೀವಿ, ಪಕ್ಷಿಗಳ ದೇಹದ ಪರಿಚಯ ಮಾಡಿಕೊಡಲಾಗುತ್ತದೆ. ಆದರೆ, ಅವುಗಳ ವರ್ತನೆ, ಜೀವನಕ್ರಮದ ಕುತೂಹಲ ಹುಟ್ಟಿಸುವ ಅಂಶಗಳಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿಯ ಲೇಖಕ ವಿಶ್ವನಾಥ್‌ ಸುವರ್ಣ ಮಾತನಾಡಿ, ‘ಪ್ರಜಾವಾಣಿ’ ಸಂಪಾದಕರಾದ ಕೆ.ಎನ್‌.ಶಾಂತ್‌ಕುಮಾರ್‌ ಅವರು ರಾಜ್ಯದ ಕೋಟೆಗಳ ಫೋಟೊಗಳನ್ನು ತೆಗೆಯುವುದಕ್ಕಾಗಿಯೇ ರಜೆ ನೀಡಿದ್ದರು. ಅದು ‘ಕರುನಾಡ ಕೋಟೆಗಳು’ ಪುಸ್ತಕವಾಗಿ ಬಂದಿದೆ. ನಿವೃತ್ತಿಯ ನಂತರ ಈ ಕೃತಿ ಬಂದಿದೆ. ಅದಕ್ಕೆ ಸಂಪಾದಕರು ಹಾಗೂ ಪತ್ರಕರ್ತರಾದ ನಾಗೇಶ್‌ ಹೆಗಡೆ ಪ್ರೋತ್ಸಾಹವೇ ಕಾರಣ’ ಎಂದರು.

ಸುವರ್ಣ ಪಬ್ಲಿಕೇಶನ್ ಪ್ರಕಟಿಸಿರುವ ಕೃತಿಯ ಬೆಲೆ ₹3,000.

ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಸಂತೃಪ್ತ್,ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್‌ ಕುಮಾರ್‌ ಗೌಡ,ಪತ್ರಿಕಾ ಛಾಯಾಗ್ರಾಹಕ ಎಸ್‌.ಆರ್‌.ಮಧುಸೂದನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.